ಚಿಕ್ಕಮಗಳೂರು, ಮಾ. 15 (DaijiworldNews/HR): "ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತನ್ನ ಹೆಸರನ್ನ ಏಕೆ ತಳುಕು ಹಾಕುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ಮೊದಲಿಗೆ ಪ್ರಕರಣದ ತನಿಖೆಯಾಗಲಿ ಆಗ ನಿರ್ಮಾಪಕ, ನಿರ್ದೇಶಕ, ನಟ ಯಾರೆಂದು ತಿಳಿಯುತ್ತದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿ.ಡಿ ಪ್ರಕರಣ ಕರ್ನಾಟಕ ರಾಜಕಾರಣಕ್ಕೆ ಗೌರವ ತರುವ ವಿಷಯವಲ್ಲ, ಹಿಂದೆ ಮೌಲ್ಯಧಾರಿತ ರಾಜಕೀಯದ ಚರ್ಚೆ ನಡೆಯುತ್ತಿತ್ತುಆದರೆ ಈಗ ಸಿ.ಡಿ ಆಧಾರಿತ ರಾಜಕೀಯದ ಚರ್ಚೆ ನಡೆಯುತ್ತಿದೆ. ಮೌಲ್ಯಧಾರಿತವೋ, ಸಿಡಿ ಆಧಾರಿತ ರಾಜಕಾರಣ ಬೇಕೋ ಎನ್ನುವ ಬಗ್ಗೆ ಎಲ್ಲರೂ ಯೋಚಿಸಬೇಕು" ಎಂದರು.
ಇನ್ನು "ಸಾರ್ವಜನಿಕ ಜೀವನದಲ್ಲಿರುವ ನಾವು ಪರಿಶುದ್ಧ ರಾಜಕಾರಣದ ಬಗ್ಗೆ ಆಲೋಚಿಸಿ, ರಾಜಕಾರಣಿಗಳಿಗೆ ಜನ ಲಜ್ಜೆ-ಮನಲಜ್ಜೆ ಎರಡೂ ಇರಬೇಕು. ನಮಗೆ ನಾವೇ ಪರಿಮಿತಿ ಹಾಕಿಕೊಳ್ಳುವುದು ಮನಲಜ್ಜೆ, ಜನರಿಗೆ ಹೆದರುವುದು ಜನಲಜ್ಜೆ" ಎಂದು ಹೇಳಿದ್ದಾರೆ.