ಭಾಗ್ಪಥ್, ಮಾ.15 (DaijiworldNews/MB) : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ರೈತರನ್ನು ಅಪರಾಧಿಗಳಂತೆ ಕಾಣಬಾರದು ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮನವಿ ಮಾಡಿಕೊಂಡಿದ್ದು ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ದ ಪ್ರತಿಭಟಿಸುತ್ತಿರುವ ರೈತರ ಪರವಾಗಿ ಹೇಳಿಕೆ ನೀಡಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ''ಕೃಷಿಕರ ಪರವಾದ ಯಾವ ಕಾನೂನುಗಳು ಇಲ್ಲ. ರೈತ ಹಾಗೂ ಕೃಷಿಕ ತೃಪ್ತಿಯಿಂದ ಇಲ್ಲದ ದೇಶ ಎಂದಿಗೂ ಮುಂದುವರಿಯುವುದಿಲ್ಲ. ರೈತರು ಹಾಗೂ ಯೋಧರನ್ನು ತೃಪ್ತರಾಗಿಸುವುದು ಮುಖ್ಯ'' ಎಂದರು.
''ದೇಶದಲ್ಲಿ ರೈತರು ದಿನ ಕಳೆದಂತೆ ಬಡವರಾಗುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೇತನ ಪ್ರತಿ ಮೂರು ವರ್ಷಕ್ಕೊಮ್ಮೆ ಅಧಿಕವಾಗುತ್ತದೆ'' ಎಂದು ಕೂಡಾ ಹೇಳಿದರು.
''ರೈತರ ಮೇಲೆ ಬಲ ಪ್ರಯೋಗ ಮಾಡಿಸಬಾರದೆಂದು, ರೈತ ಮುಖಂಡ ರಾಕೇಶ್ ಟಿಕಾಯತ್ ಬಂಧನದ ಬಗ್ಗೆ ವದಂತಿ ಕೇಳಿಬಂದಾಗ, ಅವರನ್ನು ಬಂಧಿಸಬಾರದೆಂದು ನಾನು ತಡೆದಿದ್ದೇನೆ. ಪ್ರಧಾನಿ ಹಾಗೂ ಗೃಹಸಚಿವರಿಗೆ ಮನವಿ ಮಾಡಿದ್ದೇನೆ'' ಎಂದು ಹೇಳಿರುವ ಮೇಘಾಲಯ ರಾಜ್ಯಪಾಲರು, ''ಕನಿಷ್ಠ ಬೆಂಬಲ ಬೆಲೆಯ ವಿಚಾರವಾಗಿ ಕೇಂದ್ರ ಸರ್ಕಾರವು ಶಾಸನದಲ್ಲೇ ಖಚಿತ ಮಾಹಿತಿ ನೀಡಿದರೆ ರೈತರು ತಮ್ಮ ಪಟ್ಟು ಬಿಡಬಹುದು'' ಎಂದು ಕೇಂದ್ರ ಸರ್ಕಾರಕ್ಕೆ ಸಲಹೆಯನ್ನೂ ನೀಡಿದರು.