ಬೆಂಗಳೂರು, ಮಾ 15(DaijiworldNews/MS): ರಾಜ್ಯ ರಾಜಕೀಯಲ್ಲಿ ತಲ್ಲಣ ಸೃಷ್ಟಿಸಿದ್ದ ಸಿಡಿ ಪ್ರಕರಣದ ಹಿಂದೆ ಇರುವ "ಮಹಾನ್ ನಾಯಕ" ಯಾರೆಂದು ತಿಳಿಯಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಅವರು, "ಸಿಡಿ ಪ್ರಕರಣ ಈಗ ಸಾರ್ವಜನಿಕರಿಗೆ ನಗೆಪಾಟಲಿಗೆ ಪರಿವರ್ತನೆಯಾಗುತ್ತಿದೆ. ಯಾವುದೋ ಲಿಂಕ್ ತೆಗೆದುಕೊಂಡು ಟಿವಿ ಧಾರವಾಹಿ ರೀತಿ ಇದೆ. ಅಂತಿಮವಾಗಿ ಯಾವ ತಿರುವು ಪಡೆದು, ಯಾರಿಗೆ ಸುತ್ತಾಕಿಕೊಳ್ಳಲಿದೆ ಎಂದು ನೋಡಲು ಕಾಯುತ್ತಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಡಿ.ಕೆ. ಶಿವಕುಮಾರ್ ಅವರು ಸಿಡಿ ಪ್ರಕರಣದಲ್ಲಿ ಯಾಕೆ ಅವರ ಹೆಸರು ತಂದುಕೊಂಡರು ಗೊತ್ತಿಲ್ಲ. ಯಾರಾದರೂ ಹೇಳಿದ್ದಾರಾ ಅವರೇ ಮಾಡಿದ್ದಾರೆ ಎಂದು? ಯಾಕೇ ಅವರೇ ಊಹೇ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
"ನನ್ನ ಮೇಲೆ ಹಿಂದಿನಿಂದಲೂ ಷಡ್ಯಂತ್ರಗಳು ನಡೆದುಕೊಂಡು ಬಂದಿವೆ. ಅವು ಈಗಲೂ ಮುಂದುವರಿದಿವೆ. ಸಿ.ಡಿ ಪ್ರಕರಣದಲ್ಲಿ ನನ್ನನ್ನು ಸುಖಾ ಸುಮ್ಮನೆ ಸಿಲುಕಿಸುವ ಪ್ರಯತ್ನ ನಡೆದಿದೆ" ಎಂದು ಶಿವಮೊಗ್ಗದಲ್ಲಿ ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದರು.