ಶಿವಮೊಗ್ಗ, ಮಾ.15 (DaijiworldNews/MB) : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ದಾಖಲಿಸಿರುವ ಕೇಸನ್ನು ಕ್ಲೋಸ್ ಮಾಡಿ ಬಿ ರಿಪೋರ್ಟ್ ಹಾಕುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹ ಮಾಡಿದ್ದಾರೆ.
''ಸೋನಿಯಾ ಗಾಂಧಿಯ ವಿರುದ್ದವೇ ಕೇಸು ಹಾಕಿದವರಿಗೆ ನಮ್ಮಂತವರು ಲೆಕ್ಕಕ್ಕಿಲ್ಲ. ಆದರೆ ಇದೆಲ್ಲಾ ಹೆಚ್ಚು ದಿನ ನಡೆಯಲ್ಲ. ರಾತ್ರಿ ಬೆಳಗಾಗುವುದರಲ್ಲಿ ಅಧಿಕಾರ ಬದಲಾಗುವ ಕಾಲವಿದು ಆಗಿರುವಾಗ ಯಾವುದೇ ಪಕ್ಷದ ಪರ ಕೆಲಸ ಮಾಡಿ ಸ್ಟಾರ್ ನೀಡಲಾರದು ಎಂದು ಎಸ್ಪಿ ಶಾಂತರಾಜು ಮನಗಾಣಬೇಕು. ಅವರು ಸಾಗರದಲ್ಲಿ ಒಬ್ಬ ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದನೆಂದು ಎಫ್ಐಆರ್ ಹಾಕಿದ್ದಾರೆ'' ಎಂದು ಹೇಳಿದರು.
''ಇನ್ನು ಮೂರು ತಿಂಗಳಾದ ನಂತರ ಬಿ ರಿಪೋರ್ಟ್ ಹಾಕಿ ಈ ಕೇಸ್ ಕ್ಲೋಸ್ ಮಾಡಿಸುತ್ತೇನೆ ಎಂದು ದೂರು ದಾಖಲಾದ ಮರುದಿನವೇ ಸಿಎಂ ಬಿಎಸ್ವೈ ಭರವಸೆ ನೀಡಿದ್ದರು. ಆದರೆ ಈವರೆಗೂ ಮಾಡಿಲ್ಲ'' ಎಂದು ಕೂಡಾ ಡಿಕೆಶಿ ತಿಳಿಸಿದ್ದಾರೆ.
''ಶಿವಮೊಗ್ಗದಲ್ಲಿ ಏಳಕ್ಕೆ ಏಳು ಸ್ಥಾನವೂ ಕಾಂಗ್ರೆಸ್ ಬಾಚಿಕೊಳ್ಳಲಿದೆ'' ಎಂದು ಹೇಳಿದ ಡಿಕೆಶಿ, ''ಬಿಜೆಪಿಯವರಿಗೆ ಲೂಟಿ ಮಾಡುವುದೇ ಕೆಲಸವಾಗಿ ಬಿಟ್ಟಿದೆ. ಅದ್ಯಾವನೋ ದೂರು ನೀಡಿದ ಎಂದು ಸೋನಿಯಾ ಗಾಂಧಿ ಮೇಲೆಯೇ ಸುಳ್ಳು ಕೇಸು ಹಾಕಿದ್ದಾರೆ. ಈವರೆಗೂ ಬಿ ರಿಪೋರ್ಟ್ ನೀಡಿಲ್ಲ'' ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ನಲ್ಲಿ ಪಿಎಂ ಕೇರ್ಸ್ ಫಂಡ್ ದುರುಪಯೋಗವಾಗುವ ಬಗ್ಗೆ ಟ್ವೀಟ್ ಮಾಡಲಾಗಿತ್ತು ಈ ವಿಚಾರವಾಗಿ ವಕೀಲ ಕೆ.ವಿ. ಪ್ರವೀಣ್ ಕುಮಾರ್ ಅವರು ಸೋನಿಯಾ ಗಾಂಧಿ ವಿರುದ್ಧ ಸಾಗರದ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಿಸಲಾಗಿತ್ತು. ದೂರಿನಲ್ಲಿ ಪಿ.ಎಂ. ಕೇರ್ಸ್ ನಿಧಿಯ ಬಗ್ಗೆ ಅವಹೇಳನಕಾರಿ ಟ್ವೀಟ್ ಪ್ರಕಟಿಸುವ ಮೂಲಕ ನಾಗರಿಕರಲ್ಲಿ ಅಪನಂಬಿಕೆ ಹುಟ್ಟಿಸಿ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಹುನ್ನಾರ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.