ಚೆನ್ನೈ, ಮಾ.15 (DaijiworldNews/PY): ಮಾಜಿ ಸಿಎಂ ಜಯಲಲಿತಾ ಅವರ ನಿಧನಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿರುವ ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು, "ಜಯಲಲಿತಾ ಅವರ ಸಾವಿಗೆ ಡಿಎಂಕೆ ಪಕ್ಷದ ಹಿರಿಯ ನಾಯಕ, ಮಾಜಿ ಸಿಎಂ ದಿ. ಎಂ.ಕರುಣಾನಿಧಿ ಹಾಗೂ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರೇ ಕಾರಣ" ಎಂದಿದ್ದಾರೆ.
"ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಅವರನ್ನು ತಪ್ಪಾಗಿ ಆರೋಪಿಸಲಾಯಿತು. 2015ರಲ್ಲಿ ಎಲ್ಲಾ ಆರೋಪಗಳಿಂದ ಖುಲಾಸೆಯಾಗಿದ್ದರೂ ಕೂಡಾ ಡಿಎಂಕೆ ಅದರ ವಿರುದ್ದ ಮೇಲ್ಮನವಿ ಸಲ್ಲಿಸಿತ್ತು. ಈ ವಿಚಾರವು ಜಯಲಲಿತಾ ಅವರನ್ನು ಖಿನ್ನತೆಗೆ ದೂಡಿತು" ಎಂದು ದೂರಿದ್ದಾರೆ.
"ಜಯಲಲಿತಾ ಅವರ ಸಾವಿಗೆ ಡಿಎಂಕೆ ಕಾರಣ. ಖಂಡಿತವಾಗಿ ದೇವರು ಕರುಣಾನಿಧಿ ಹಾಗೂ ಸ್ಟಾಲಿನ್ಗೆ ಶಿಕ್ಷೆ ನೀಡುತ್ತಾನೆ. ಅಮ್ಮನ ಸಾವಿಗೆ ಕಾರಣ ಯಾರು ಎನ್ನುವುದನ್ನು ತಮಿಳುನಾಡು ಜನತೆ ಮನಗಂಡಿದ್ದಾರೆ. ಅವರಿಗೆ ಅಮ್ಮನ ಆತ್ಮ ಖಂಡಿತವಾಗಿಯೂ ಶಿಕ್ಷೆ ನೀಡುತ್ತದೆ" ಎಂದಿದ್ದಾರೆ.
ಪ್ರಸ್ತುತ ಅರುಮುಗಸ್ವಾಮಿ ಆಯೋಗವು ಜಯಲಲಿತಾ ಅವರ ಸಾವಿನ ತನಿಖೆ ನಡೆಸುತ್ತಿದ್ದು, ತನಿಖೆಗೆ ಚುರುಕುಮುಟ್ಟಿಸುವ ವಿಶ್ವಸವನ್ನು ಎಂ.ಕೆ ಸ್ಟಾಲಿನ್ ಅವರು ನೀಡಿದ್ದು, ಈ ವಿಚಾರದ ಬಗ್ಗೆ ಮಾತನಾಡಿದ ಪಳನಿಸ್ವಾಮಿ, "ಮಾಜಿ ಸಿಎಂ ಜಯಲಲಿತಾ ಅವರ ಸಾವಿಗೆ ಡಿಎಂಕೆಯೇ ಕಾರಣ" ಎಂದು ಹೇಳಿದ್ದಾರೆ.
ಎಐಎಡಿಎಂಕೆ ಹಾಗೂ ಡಿಎಂಕೆ ಪ್ರಣಾಳಿಕೆಗಳ ನಡುವಿನ ವ್ಯತ್ಯಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪಳನಿಸ್ವಾಮಿ, "ಈಗಾಗಲೇ ರಾಜ್ಯ ಸರ್ಕಾರ ಕೃಷಿ ಸಾಲ ಮನ್ನಾ ಸೇರಿದಂತೆ ಮುಂತಾದ ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದು, ಇದೀಗ ಸ್ಟಾಲಿನ್ ಭರವಸೆ ನೀಡಿದ್ದಾರೆ" ಎಂದಿದ್ದಾರೆ.
ಎಪ್ರಿಲ್ 6ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಉಚಿತ ಸೋಲಾರ್ ಅಡುಗೆ ಸ್ಟೌ, 75 ಸಾವಿರ ರೂ. ವರೆಗೆ ರೈತರಿಗೆ ಸಬ್ಸಿಡಿ, ಉಚಿತ ವಾಷಿಂಗ್ ಮೆಷಿನದದದದ, ಉಚಿತ ಮನೆ ನೀಡುವ ಭರವಸೆ ನೀಡಿದೆ.