ಕೇರಳ, ಮಾ. 15 (DaijiworldNews/HR): ಅಭ್ಯರ್ಥಿ ಪಟ್ಟಿಯನ್ನು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಮನನ್ಥವಡಿಯ ಬಿಜೆಪಿ ಅಭ್ಯರ್ಥಿ ಮಣಿಕಂದನ್ ಅಲಿಯಾಸ್ ಮಣಿಕುಟ್ಟನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ನಾನು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದಿಂದ ಸ್ಪರ್ಧಿಸಲು ಇಚ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನನ್ನ ಹೆಸರನ್ನು ಘೋಷಣೆ ಮಾಡಿದ ವಿಷಯವೇ ನನಗೆ ತಿಳಿದಿರಲಿಲ್ಲ, ಪಕ್ಷವು ವಯನಾಡಿನ ಪನಿಯಾ ಬುಡಕಟ್ಟಿನ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹೆಮ್ಮೆಪಡುತ್ತಾರೆ. ಆದರೆ ನಾನು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಚಿಸುವುದಿಲ್ಲ. ನನ್ನ ಅರ್ಹತೆಗೆ ಅನುಗುಣವಾಗಿ ಕೆಲಸ ಮಾಡಲು ಮತ್ತು ನನ್ನ ಕುಟುಂಬವನ್ನು ನೋಡಿಕೊಳ್ಳಲು ನಾನು ಬಯಸುತ್ತೇನೆ ಹಾಗಾಗಿ ಬಿಜೆಪಿ ನಿರ್ಧಾರವನ್ನು ಸಂತೋಷದಿಂದ ತಿರಸ್ಕರಿಸುತ್ತೇ"ನೆ ಎಂದರು.
ಇನ್ನು ನನ್ನ ಹೆಸರನ್ನು ಪ್ರಕಟಿಸಿರುವುದು ನನಗೆ ಮನೆಯಲ್ಲಿ ಟಿ.ವಿಯಲ್ಲಿ ಸುದ್ದಿ ನೋಡುವಾಗ ಗೊತ್ತಾಗಿದ್ದು, ಪ್ರಕಟಣೆಯ ನಂತರ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರು ನನ್ನನ್ನು ಕರೆದು ಈ ಬಗ್ಗೆ ಚರ್ಚಿಸಿದರು ಎಂದಿದ್ದಾರೆ.
31 ವರ್ಷದ ಮಣಿಕಂದನ್ ಎಂಬಿಎ ಪದವೀಧರರಾಗಿದ್ದು, ಪದವಿಯನ್ನು ಪಡೆದ ಪನಿಯಾ ಸಮುದಾಯದಲ್ಲಿ ಮೊದಲಿಗರು. ಅವರು ಮನಂತವಾಡಿ ಪ್ಯಾರಿಷ್ ಮೂಲದವರು. ಅವರು ತಮ್ಮ ಮೂಲ ಶಿಕ್ಷಣವನ್ನು ಮನಂತವಾಡಿ ಜಿ.ಯು.ಪಿ ಶಾಲೆಯಿಂದ ಮುಗಿಸಿದರು ಮತ್ತು ಪ್ರಸ್ತುತ ಕೇರಳ ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದಾರೆ.