ಬೆಂಗಳೂರು, ಮಾ.15 (DaijiworldNews/MB) : ಆರೋಪಿಯೋರ್ವ ಮಳಿಗೆಗಳಲ್ಲಿ ಚಿನ್ನಾಭರಣವನ್ನು ಕದಿಯುವುದು ಹೇಗೆಂದು ನೋಡಿಕೊಂಡು ಚಿನ್ನಾಭರಣ ಮಳಿಗೆಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಹೋಗಿ ಕಳವು ಮಾಡುತ್ತಿದ್ದ ಘಟನೆ ಮಲ್ಲೇಶ್ವರನಲ್ಲಿ ನಡೆದಿದ್ದು ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಮಾಗಡಿ ರಸ್ತೆಯ ಕೆಂಪಾಪುರ ಅಗ್ರಹಾರ ನಿವಾಸಿ ಸಂತೋಷ್, ಫೈನಾನ್ಸ್ ಸರ್ವೀಸ್ ಹಾಗೂ ಇನ್ವೆಸ್ಟ್ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿ. ಸಂತೋಷ್ಕುಮಾರ್ (23) ಎಂಬಾತ ಬಂಧಿತ ಆರೋಪಿ. ಆತನಿಂದ 4.76 ಲಕ್ಷ ಮೌಲ್ಯದ 92 ಗ್ರಾಂ ಚಿನ್ನಾಭರಣ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ''ಆರೋಪಿ ಚಿನ್ನಾಭರಣ ಮಳಿಗೆಯಲ್ಲಿ ಹೇಗೆ ಕಳ್ಳತನ ಮಾಡುವುದು ಎಂದು ಯೂಟ್ಯೂಬ್ನಲ್ಲಿ ನೋಡಿಕೊಂಡು ಆಭರಣಗಳನ್ನು ಕಳವು ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆತ ಗ್ರಾಹಕನಂತೆ ಆಭರಣ ಮಳಿಗೆಗೆ ತೆರಳಿ ಅಲ್ಲಿ ಕೆಲಸಗಾರರ ಗಮನ ಬೇರೆಡೆಗೆ ಸೆಳೆದು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ. ಇತ್ತೀಚೆಗೆ ಆತ ಮಲ್ಲೇಶ್ವರದ ಸಂಪಿಗೆ ರಸ್ತೆಯ ಮಳಿಗೆಯೊಂದರಲ್ಲಿ ಕಳ್ಳತನ ಮಾಡಿದ್ದು ವ್ಯವಸ್ಥಾಪಕ ದೂರು ನೀಡಿದ್ದರು ಅದರಂತೆ ಶೋಧ ನಡೆಸುತ್ತಿದ್ದ ವೇಳೆ ಮಳಿಗೆಯೊಂದರಲ್ಲಿ ಆರೋಪಿ ಅನುಮಾನಾಸ್ಪದವಾಗಿ ಕಂಡಿದ್ದು ಗಸ್ತಿನಲ್ಲಿದ್ದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ'' ಎಂದು ತಿಳಿಸಿದ್ದಾರೆ.
ಇನ್ನು, ''ಆರೋಪಿಯು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದು ನಷ್ಟ ಅನುಭವಿಸಿದ್ದರು. ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಆತನ ಕೆಲಸದಿಂದ ಬರುವ ವೇತನವು ಆತನ ಮನೆ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಈ ಹಿನ್ನೆಲೆ ಮಳಿಗೆಗಳಲ್ಲಿ ಚಿನ್ನಾಭರಣ ಕದಿಯಲಾರಂಭಿಸಿದ್ದರು. ಅದನ್ನು ಮಾರಿ ಬಂದ ಹಣದಿಂದ ಮನೆ ನಿರ್ವಹಣೆಗಾಗಿ ಬಳಸುತ್ತಿದ್ದ'' ಎಂದೂ ಪೊಲೀಸರು ವಿವರಿಸಿದ್ದಾರೆ.