ಚೆನ್ನೈ, ಮಾ.15 (DaijiworldNews/PY): ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಪ್ರಚಾರಕ್ಕೆ ತೆರಳುತ್ತಿದ್ದ ಹಿರಿಯ ನಟ ಹಾಗೂ ಮಕ್ಕಳ್ ನೀಧಿ ಮಯ್ಯುಂ ಮುಖ್ಯಸ್ಥ ಕಮಲ್ ಹಾಸನ್ ಅವರ ಮೇಲೆ ಕಾರಿನ ಮೇಲೆ ದಾಳಿ ನಡೆಸಲಾಗಿದೆ.
ರವಿವಾರ ತಡರಾತ್ರಿ ಕಮಲ್ ಹಾಸನ್ ಅವರು ಚುನಾವಣೆ ಪ್ರಚಾರ ಮುಗಿಸಿ ಕಾಂಚಿಪುರಂನಲ್ಲಿ ಹೋಟೆಲ್ ಕಡೆಗೆ ಹೋಗುತ್ತಿದ್ದ ಸಂದರ್ಭ ಯುವಕನೋರ್ವ ಕಮಲ್ ಹಾಸನ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದು, ಕಾರಿನ ವಿಂಡ್ ಸ್ಕ್ರೀನ್ಗೆ ಹಾನಿಯಾಗಿದೆ. ಘಟನೆಯಲ್ಲಿ ಕಮಲ್ ಹಾಸನ್ ಅವರಿಗೆ ಯಾವುದೇ ಗಾಯವಾಗಿಲ್ಲ.
ಈ ಬಗ್ಗೆ ಮಕ್ಕಳ್ ನೀಧಿ ಮಯ್ಯುಂ ಪಕ್ಷದ ಮುಖಂಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಎ.ಜಿ. ಮೌರ್ಯ ಅವರು ಮಾಹಿತಿ ನೀಡಿದ್ದು, "ನಮ್ಮ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಕಾರಿನ ಮೇಲೆ ಯುವಕನೊಬ್ಬ ದಾಳಿ ನಡೆಸಿದ್ದು, ಕಾರಿನ ವಿಂಡ್ ಸ್ಕ್ರೀನ್ ಹಾನಿಯಾಗಿದೆ. ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ನಮ್ಮ ಪಕ್ಷ ಈ ರೀತಿಯಾದ ಘಟನೆಗಳಿಂದ ಹೆದರುವುದಿಲ್ಲ" ಎಂದು ಹೇಳಿದ್ದಾರೆ.
ಮಕ್ಕಳ ನೀಧಿ ಮಯ್ಯುಂ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮದ್ಯದ ಅಮಲಿನಲ್ಲಿದ್ದ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.