ಬೆಂಗಳೂರು, ಮಾ 15(DaijiworldNews/MS): ಅಶ್ಲೀಲ ಸಿ.ಡಿ. ಪ್ರಕರಣದ ಯುವತಿಯ ಮೊಬೈಲ್ ನಂಬರ್ ಪತ್ತೆ ಹಚ್ಚಿದ್ದ ಪೊಲೀಸರು ಆಕೆಯ ವಾಟ್ಸ್ ಆ್ಯಪ್ ಮತ್ತು ಇ ಮೇಲ್ಗೆ ನೋಟಿಸ್ ಕಳುಹಿಸಿದ್ದ ಬೆನ್ನಲ್ಲೇ ಎಸ್ಐಟಿ ತಂಡ ಆಕೆಯನ್ನು ಹೈದರಾಬಾದ್ನಲ್ಲಿ ಭಾನುವಾರ ರಾತ್ರಿ ಪತ್ತೆ ಹಚ್ಚಿ ಆಕೆಯನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ.
ಸಿಡಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಹೈದರಾಬಾದ್ನ ಪರಿಚಯದವರ ಮನೆಯಲ್ಲಿ ವಾಸವಾಗಿದ್ದ ಯುವತಿ ಶನಿವಾರ ಅಲ್ಲಿಂದಲೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ.
ಸೆಕ್ಸ್ ಸಿಡಿ ಪ್ರಕರಣ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ ಕೆಲವೇ ಕ್ಷಣಗಳಲ್ಲಿ, ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು ಎನ್ನಲಾದ ಯುವತಿ ಪ್ರತ್ಯಕ್ಷಳಾಗಿದ್ದು, ಗೃಹಸಚಿವರು ರಕ್ಷಣೆ ಒದಗಿಸಬೇಕು ಎಂದು ವಿಡಿಯೋ ಮೂಲಕ ಕೋರಿದ್ದಳು.
ಬೆಂಗಳೂರಿನ ಆರ್.ಟಿ. ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಂತ್ರಸ್ತೆಯು ಸಿ.ಡಿ. ಬಹಿರಂಗವಾದ ಕೆಲ ದಿನಗಳ ಅನಂತರ ಮಾಲಕರಿಗೆ ಫೋನ್ ಮಾಡಿ, ನನ್ನಿಂದ ನಿಮಗೆ ತೊಂದರೆ ಆಗಿದೆ. ದಯವಿಟ್ಟು ಕ್ಷಮಿಸಿ. ಕೆಲವು ದಿನಗಳ ಅನಂತರ ಮನೆ ಖಾಲಿ ಮಾಡುತ್ತೇನೆ ಎಂದಿದ್ದಾಳೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ವಿಜಯಪುರದ ನಿಡಗುಂದಿಗೆ ತೆರಳಿ ಯುವತಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ.