ಶ್ರೀನಗರ, ಮಾ.15 (DaijiworldNews/MB) : ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಉಗ್ರನೊಬ್ಬನನ್ನು ಹತ್ಯೆಗೈದಿದ್ದು ಅಮೇರಿಕಾ ತಯಾರಿಸಿರುವ ರೈಫಲ್ ಮತ್ತು 36 ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದೆ. ಹಾಗೆಯೇ ಸ್ಥಳದಲ್ಲಿದ್ದ 9,600 ನಗದು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಟ್ವಿಟರ್ನಲ್ಲಿ ಸೇನೆ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ''ಶನಿವಾರ ಸಂಜೆ ಭದ್ರತಾ ಪಡೆಗಳಳಿಗೆ ಜೈಶ್ ಎ ಮೊಹಮ್ಮದ್ (ಜೆಇಎಂ) ಉನ್ನತ ಕಮಾಂಡರ್ ಸಜ್ಜಾದ್ ಅಫ್ಘಾನಿ ಮತ್ತು ವಿದೇಶಿ ಉಗ್ರರು ಇರುವ ಬಗ್ಗೆ ಮಾಹಿತಿ ದೊರೆತಿದ್ದು ಆ ಕೂಡಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ರಾತ್ರಿ ವೇಳೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು ಈ ಸಂದರ್ಭದಲ್ಲಿ ಉಗ್ರರು ಪರಾರಿಯಾಗಬಾರದೆಂದು ಗ್ರಾಮದ ಸುತ್ತಲೂ ಭದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿತ್ತು'' ಎಂದು ತಿಳಿಸಿದ್ದಾರೆ.
''ಶೋಧ ಕಾರ್ಯಾಚರಣೆ ವೇಳೆ ಮಾಹಿತಿ ನೀಡಲು ಬಂದಿದ್ದ ಐವರು ಗ್ರಾಮಸ್ಥರು ಉಗ್ರರು ತಂಗಿದ್ದ ಮನೆಯೊಳಗೆ ಸಿಕ್ಕಿಹಾಕಿಕೊಂಡ ಕಾರಣದಿಂದಾಗಿ ಒಮ್ಮೆಲೇ ಕಾರ್ಯಾಚರಣೆ ನಿಲ್ಲಿಸಿ ಆ ಐವರು ಗ್ರಾಮಸ್ಥರನ್ನು ರಕ್ಷಿಸಿದ ಬಳಿಕ ಶೋಧ ಕಾರ್ಯ ಮುಂದುವರಿಸಲಾಗಿದೆ. ಎನ್ಕೌಂಟರ್ನಲ್ಲಿ ಹತ್ಯೆಯಾದಾತ ಉಗ್ರ ಸಜ್ಜಾದ್ ಅಫ್ಘಾನಿ ಎಂಬುದು ಇನ್ನೂ ದೃಢಪಟ್ಟಿಲ್ಲ'' ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ.