ಬೆಂಗಳೂರು, ಮಾ. 14 (DaijiworldNews/SM): ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಗೋಚರವಾಗುತ್ತಿದ್ದು, ಈ ಹಿನ್ನೆಲೆ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಲಾಕ್ ಡೌನ್ ಮಾಡುವುದು ಬೇಡ ಎಂದಾದಲ್ಲಿ ಜನರು ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಬೇಕು ಎಂದಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 15ರ ಸೋಮವಾರದಂದು ತಜ್ಞರ ಸಭೆ ಕರೆಯಲಾಗಿದೆ. ತಜ್ಞರು, ಸಚಿವರ ಜತೆ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಅಲ್ಲಿನ ಸಲಹೆ ಸೂಚನೆಗಳನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದೆಂದರು.
ಮತ್ತೊಂದೆಡೆ ಸಾರ್ವಜನಿಕ ಜವಾಬ್ದಾರಿಯ ಬಗ್ಗೆ ಉಲ್ಲೇಖ ಮಾಡಿರುವ ಸಿಎಂ ಬಿಎಸ್ ವೈ, ಲಾಕ್ ಡೌನ್ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಲಾಕ್ ಡೌನ್ ಮಾಡುವುದು ಬೇಡ ಎಂದಾದಲ್ಲಿ, ಸರಕಾರ ನೀಡುವ ಮಾರ್ಗಸೂಚಿ, ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.
ಸದ್ಯ ಯಾವುದೇ ಲಾಕ್ ಡೌನ್ ಆಗುವ ಲಕ್ಷಣಗಳಿಲ್ಲ. ಆದರೆ, ಮುಂದಿನ ದಿನಗಳಲ್ಲಿ ನಿಯಂತ್ರಣ ದೃಷ್ಠಿಯಲ್ಲಿ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯವಿದೆ.