ವಿಜಯಪುರ, ಮಾ. 14 (DaijiworldNews/SM): ರಮೇಶ್ ಜಾರಕಿಹೊಳಿಯರವ ಸಿಡಿ ವೈರಲ್ ಆದ ಬಳಿಕ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ಎಸ್ ಐಟಿ ತನಿಖೆಯ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಎಸ್ ಐಟಿ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಈ ಹಿನ್ನೆಲೆ ಸಿಬಿಐ ತನಿಖೆಗೆ ಆಗ್ರಹಿಸುವ ಅಗತ್ಯವಿಲ್ಲ ಎಂದಿದ್ದಾರೆ. ಮತ್ತೊಂದೆಡೆ ಈ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಅಲ್ಲದೆ, ಯಾರ ವಿರುದ್ಧ ಆರೋಪ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಈ ಪ್ರಕರಣದ ಕುರಿತಂತೆ ಹೆಚ್ಚೇನು ಪ್ರತಿಕ್ರಿಯೆ ನೀಡುವುದಿಲ್ಲ. ಎಸ್ ಐಟಿ ತನಿಖೆ ನಡೆಯುತ್ತಿದ್ದು, ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಇಂತಹ ಪ್ರಕರಣಗಳು ನಡೆಯಬಾರದೆಂದು ಸಮಾಜ ಕೂಡ ಬಯಸುತ್ತಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.