ಹುಬ್ಬಳ್ಳಿ, ಮಾ. 14 (DaijiworldNews/SM): ರಾಜ್ಯದಲ್ಲಿ ಕೊರೋನಾ ಸೋಂಕು ನಿಧಾನವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಡುವೆ ಕಾಲೇಜುಗಳಿಗೆ ಹದಿನೈದು ದಿನಗಳ ರಜೆ ಘೋಷಿಸಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಿಯ ಬಿಡಲಾಗುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಠ ನಾರಾಯಣ್ ತಿಳಿಸಿದ್ದಾರೆ.
ಸರಕಾರ ಯಾವುದೇ ಕಾರಣಕ್ಕೂ ಇಂತಹ ನಿರ್ಧಾರ ಕೈಗೊಂಡಿಲ್ಲ. ಯಾರೋ ಕಿಡಿಗೇಡಿಗಳು ನಕಲಿ ಸುತ್ತೋಲೆಯನ್ನು ತಯಾರಿಸಿ ಸಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಲ್ಲಿ ಗೊಂದಲ ಉಂಟಾಗಿದೆ. ಸರಕಾರದ ಹೆಸರಿನಲ್ಲಿ ನಕಲಿ ಸುತ್ತೋಲೆ ತಯಾರಿಸಿರುವುದು ಅಪರಾಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಸೈಬರ್ ಕ್ರೈಮ್ ತಂಡ ತಕ್ಷಣ ಕಿಡಿಗೇಡಿಗಳನ್ನು ತಪ್ಪೆ ಹಚ್ಚಲಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ.
ಸರಕಾರಕ್ಕೆ ಮಕ್ಕಳ ಭವಿಷ್ಯ ಮುಖ್ಯವಾಗಿದೆ. ಯಾವುದೇ ಕಾರಣಕ್ಕೂ ಯಾರೂ ಕೂಡ ಮಕ್ಕಳ ಭವಿಷ್ಯದ ವಿಚಾರದಲ್ಲಿ ಇಂತಹ ಚೆಲ್ಲಾಟವಾಡಬಾರದು. ಕೋವಿಡ್ ಸಂಕಷ್ಟ ಎದುರಿಸಿ ಸರಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.