ಮೈಸೂರು, ಮಾ.14 (DaijiworldNews/PY): "ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರೂ ಅಷ್ಟೇ ಯಾರೂ ಹೇಳಿದರೂ ಅಷ್ಟೇ ಇನ್ನು ಮುಂದೆ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಇಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾರೂ ಹೇಳಿದರೂ ಕೂಡಾ ಇನ್ನು ಮುಂದೆ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಇಲ್ಲ. ಚಿಹ್ನೆ ಮೇಲೆ ಸಹಕಾರ ಸಂಘಗಳ ಚುನಾವಣೆ ನಡೆಯುವುದಿಲ್ಲ. ಅವರು ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡಿದ್ದರೂ ಕೂಡಾ ಜೆಡಿಎಸ್ಗೆ ನಮ್ಮ ಕಡೆಯಿಂದ ಯಾವುದೇ ರೀತಿಯಾದ ಬೆಂಬಲವಿಲ್ಲ" ಎಂದಿದ್ದಾರೆ.
ಸಿ.ಡಿ ಪ್ರಕರಣದ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸತ್ಯ ತಿಳಿಯಬೇಕು" ಎಂದು ಹೇಳಿದ್ದಾರೆ.
"ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರಿಗೆ ಅದು ಅನಿಸುತ್ತಿರಬಹುದು. ನನ್ನನ್ನು ಸಿಕ್ಕಿಸುತ್ತಿದ್ದಾರೆ ಎಂದು ಡಿಕೆಶಿ ಅವರೇ ಹೇಳಿದ್ದಾರೆ. ಈ ರೀತಿಯಾದ ಪ್ರಕರಣಗಳಿಂದ ರಾಜಕಾರಣಿಗಳ ಮರ್ಯಾದೆ ಹೋಗುತ್ತದೆ. ಈ ರೀತಿಯಾದರೆ ರಾಜಕಾರಣಿಗಳ ಬಗ್ಗೆ ಜನರು ಹಗುರವಾಗಿ ಮಾತನಾಡಲು ಆರಂಭಿಸುತ್ತಾರೆ. ನಾವು ಏನು ಮಾಡಲು ಆಗುವುದಿಲ್ಲ" ಎಂದಿದ್ದಾರೆ.