ಪಶ್ಚಿಮಬಂಗಾಳ, ಮಾ.14 (DaijiworldNews/MB) : ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ಗಾಯಗೊಂಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ವೀಲ್ಚೇರ್ನಲ್ಲಿಯೇ ಪ್ರಚಾರಕ್ಕೆ ಇಳಿದಿದ್ದು, ಗಾಯಗೊಂಡ ಹುಲಿ ಅತ್ಯಂತ ಅಪಾಯಕಾರಿ ಪ್ರಾಣಿ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
ವೀಲ್ ಚೇರ್ ಮೂಲಕವೇ ಕೋಲ್ಕತ್ತಾದ ಗಾಂಧಿ ಪ್ರತಿಮೆಯಿಂದ ಹಜ್ಹ್ರಾದವರೆಗೂ ತಮ್ಮ ಚುನಾವಣಾ ಪ್ರಚಾರದ ರೋಡ್ ಶೋ ಆರಂಭಿಸಿದ ಮಮತಾ ಬ್ಯಾನರ್ಜಿ ಅವರೊಂದಿಗೆ ಪಕ್ಷದ ಬೆಂಬಲಿಗರು, ಕಾರ್ಯಕರ್ತರು ಜೊತೆಯಾಗಿದ್ದಾರೆ.
''ನಮಗೆ ಮತ ಹಾಕಿದರೆ ಪ್ರಜಾಪ್ರಭುತ್ವವನ್ನು ನಿಮಗೆ ಮರಳಿ ಕೊಡಿಸುತ್ತೇವೆ'' ಎಂದು ಹೇಳಿದ ಮಮತಾ ಅವರು, ''ನಾನು ವೀಲ್ಚೇರ್ನಲ್ಲಿಯೇ ಪ್ರಚಾರ ನಡೆಸುತ್ತೇನೆ. ಬಂಗಾಳದ ವಿರುದ್ದ ನಡೆಯುವ ಎಲ್ಲಾ ಪಿತೂರಿಗಳು ನಾಶವಾಗಲಿ. ಗಾಯಗೊಂಡ ಹುಲಿ ಅತ್ಯಂತ ಅಪಾಯಕಾರಿ ಪ್ರಾಣಿ'' ಎಂದು ಹೇಳಿದರು.
ಈ ವಾರದ ಆರಂಭದಲ್ಲಿ ಪ್ರಚಾರದ ವೇಳೆ ಗಾಯಗೊಂಡಿದ್ದ ದೀದಿ, ಪ್ರಚಾರದ ವೇಳೆ ಯಾರೋ ನನ್ನನ್ನು ತಳ್ಳಿದ್ದಾರೆ ಎಂದು ಆರೋಪಿಸಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಆದರೆ ಇದು ಕೇವಲ ರಾಜಕೀಯ ಬೂಟಾಟಿಕೆ ಎಂದು ವಿಪಕ್ಷ ನಾಯಕರು ದೂರಿದ್ದರು. ಹಾಗೆಯೇ ಪ್ರತ್ಯಕ್ಷದರ್ಶಿಗಳು ಬ್ಯಾನರ್ಜಿಯವರು ಬಾಗಿಲು ತೆರೆದ ಚಲಿಸುತ್ತಿರುವ ಕಾರಿನಲ್ಲಿ ಮತಯಾಚನೆ ಮಾಡುತ್ತಾ ತೆರಳುತ್ತಿದ್ದ ಸಂದರ್ಭ ಕಾರಿನ ಬಾಗಿಲು ಕಂಬಕ್ಕೆ ಢಿಕ್ಕಿಯಾಗಿ ಹಠಾತ್ ಮುಚ್ಚಿದೆ ಇದರಿಂದಾಗಿ ಸಿಎಂಗೆ ಗಾಯವಾಗಿದೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಚುನಾವಣಾ ಆಯೋಗವು ಮಮತಾ ಮೇಲೆ ದಾಳಿಯಾಗಿಲ್ಲ, ಭದ್ರತಾ ಸಿಬ್ಬಂದಿಯ ಲೋಪದಿಂದಾಗಿ ಗಾಯವಾಗಿದೆ ಎಂದು ಹೇಳಿದೆ.