ಬಿಸ್ವನಾಥ್, ಮಾ. 14 (DaijiworldNews/HR): ಬಿಜೆಪಿ ನೇತೃತ್ವದ ಸರ್ಕಾರವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ನದಿಪಾತ್ರದ ಜಾಗಗಳಲ್ಲಿ ಸ್ಮಾರ್ಟ್ಬೇಲಿಯನ್ನು ಹಾಕಿದ್ದು, ದುಬ್ರಿ ಅಂತರರಾಷ್ಟ್ರೀಯ ಗಡಿಯನ್ನು ಮುಚ್ಚಲಾಗಿದೆ. ಬಿಜೆಪಿ ಮತ್ತೆ ಅಧಿಕಾರ ಬಂದ ಬಳಿಕ ಉಳಿದ ಭಾಗಗಳಲ್ಲಿ ಬೇಲಿಗಳನ್ನು ಹಾಕಲಾಗುವುದು" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.
ಈ ಕುರಿತು ಬಿಸ್ವನಾಥ್ನಲ್ಲಿ ಬಿಜೆಪಿಯ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಅಸ್ಸಾಂನಲ್ಲಿ ಭಯೋತ್ಪಾದನೆ ಮತ್ತು ದಂಗೆಗಳು ಕಡಿಮೆಯಾಗಿದ್ದು, ಇದು ಸರ್ಕಾರದ ಅಭಿವೃದ್ದಿ ಕಾರ್ಯಗಳಿಗೆ ಇನ್ನಷ್ಟು ವೇಗವನ್ನು ನೀಡಿದೆ" ಎಂದರು.
ಇನ್ನು ಬಿಜೆಪಿ ಆಡಳಿತದಲ್ಲಿ ಹಲವಾರು ಬಂಡುಕೋರರ ಗುಂಪುಗಳು ಶರಣಾಗತಿಯಾಗಿದ್ದು, ಇದರಿಂದಾಗಿ ಅಸ್ಸಾಂನಲ್ಲಿ ಶಾಂತಿ ಮರಳಿದೆ. ಬಿಸ್ವನಾಥ್ಗೆ ನನ್ನನ್ನು ಆಹ್ವಾನಿಸಿದಾಗ ನನಗೆ 2014ರ ಆದಿವಾಸಿ ಹತ್ಯಾಕಾಂಡ ನೆನಪಿಗೆ ಬಂತು. ಆದರೆ ಈಗ ಇಲ್ಲಿ ಪರಿಸ್ಥಿತಿ ಸುಧಾರಣೆಯಾಗಿದ್ದು, ರಾಜ್ಯದಲ್ಲಿ ಶಾಂತಿಯಿದೆ ಎಂಬುದಕ್ಕಿಂತ ಉತ್ತಮವಾದ ಸುದ್ದಿ ಏನಿದೆ" ಎಂದು ಹೇಳಿದ್ದಾರೆ.