ಬೆಂಗಳೂರು, ಮಾ. 14 (DaijiworldNews/HR): ಒಂದು ರಾಷ್ಟ್ರ ಒಂದು ಚುನಾವಣೆ ರಾಜ್ಯದ ಮೇಲೂ ಪರಿಣಾಮ ಬೀರುತ್ತದೆ ಹಾಗೂ ನಾವು ನಮ್ಮ ಅಭಿಪ್ರಾಯಗಳನ್ನು ಚರ್ಚಿಸಬೇಕು,ನಾವು ಒಪ್ಪುವುದಿಲ್ಲವೆಂದು ವಿರೋಧಪಕ್ಷಗಳು ಹೇಳಬಹುದು, ಆದರೆ ಚರ್ಚೆ ನಡೆಸಲು ಅವರು ವಿಧಾನಸಭೆಗೆ ಬರಲೇಬೇಕು" ಎಂದು ರಾಜ್ಯ ಗೃಹ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾರ್ಚ್ 8 ರಂದು ಈ ವರ್ಷದ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಸರ್ಕಾರದ ಬಜೆಟ್ ಮಂಡನೆ ವಿರೋಧಿಸಿ ಕಾಂಗ್ರೆಸ್ ಪ್ರತಿಪಕ್ಷ ಸಭಾತ್ಯಾಗ ಮಾಡಿದ ಘಟನೆ ನಡೆದಿದ್ದು, ವಿರೋಧ ಪಕ್ಷಗಳು ಒಪ್ಪದಿದ್ದರೂ ಕೂಡ ವಿಷಯಗಳ ಕುರಿತು ಚರ್ಚೆ ನಡೆಸಲು ವಿಧಾನಸಭೆಗೆ ಬರಲೇಬೇಕು" ಎಂದಿದ್ದಾರೆ.
ಇನ್ನು ಈ ಹಿಂದ ನಡೆದ ಸಲಹಾ ಸಮಿತಿ ಸಭೆಯಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಿದ್ದೇವೆ, ಆದರೆ ವಿರೋಧ ಪಕ್ಷಗಳು ಇದ್ದಕ್ಕಿದ್ದಂತೆ ಯೂ ಟರ್ನ್ ಹೊಡಿದಿದ್ದು, ಬಜೆಟ್ ನಡೆಯುವಂದು ಕೂಡ ವೈಯಕ್ತಿಕವಾಗಿ ಮನವಿಯನ್ನೂ ಮಾಡಿಕೊಂಡಿದ್ದೆ. ಆದರೆ ಅವರು ಸಹಕಾರ ನೀಡದಿರಲು ನಿರ್ಧರಿಸುವಂತಿದೆ. ಜನರು ಬುದ್ಧಿವಂತರಾಗಿದ್ದು, ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ" ಎಂದರು.
ಜಾರಕಿಹೊಳೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿ.ಡಿ ಕುರಿತ ತನಿಖೆ ನಡೆಸಲು ಎಸ್ಐಟಿಗೆ ಎಲ್ಲಾ ರೀತಿಯ ಸ್ವತಂತ್ರವನ್ನೂ ನೀಡಲಾಗಿದ್ದು, ಜಾರಕಿಹೊಳಿ ನೀಡಿರುವ ಪತ್ರದಲ್ಲಿರುವ ವಿಚಾರಗಳನ್ನು ಪರಿಶೀಲನೆ ನಡೆಸಲಿದೆ. ಪ್ರಾಥಮಿಕ ತನಿಖೆ ಬಳಿಕ ಅಗತ್ಯ ಬಿದ್ದರೆ ಎಫ್ಐಆರ್ ದಾಖಲಿಸಲಾಗುತ್ತದೆ ಎಂದು ಈ ಹಿಂದೆಯೇ ನಾನು ಹೇಳಿದ್ದೇನೆ" ಎಂದು ಹೇಳಿದ್ದಾರೆ.