ಬೆಂಗಳೂರು, ಮಾ.14 (DaijiworldNews/PY): "ಉದ್ಯೋಗ ಕೇಳಿ ಬಂದ ಯುವತಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಆಕೆಯ ಹೇಳಿಕೆಯಿಂದ ಸ್ಪಷ್ಟವಾಗಿರುವ ಕಾರಣ ರಮೇಶ್ ಜಾರಕಿಹೊಳಿ ವಿರುದ್ದ ಸುಮೋಟೋ ಕೇಸು ದಾಖಲಿಸಿ, ತನಿಖೆ ಮಾಡಬೇಕು" ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಉದ್ಯೋಗ ಕೇಳಿ ಬಂದ ಯುವತಿಯನ್ನು ದುರ್ಬಳಕೆ ಮಾಡಿಕೊಂಡಿದ್ದು ಆಕೆಯ ಹೇಳಿಕೆಯಿಂದ ಸ್ಪಷ್ಟವಾಗಿದೆ. ವಿಡಿಯೋ ಬಿಡುಗಡೆ ಮಾಡಿದ್ದೇ ಮಹಾ ಅಪರಾಧ ಎನ್ನುವುದನ್ನ ಬಿಟ್ಟು ಬಿಜೆಪಿ ಸರ್ಕಾರಕ್ಕೆ ಮಹಿಳೆಯರ ಪರ ಗೌರವ ಇದ್ದಿದ್ದೆ ಆದರೆ ಯುವತಿಯ ಶೋಷಣೆ ಮಾಡಿದ ರಮೇಶ್ ಜಾರಕಿಹೊಳಿಯವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಬಂಧಿಸಿ ತನಿಖೆ ನಡೆಸಬೇಕು" ಎಂದು ಆಗ್ರಹಿಸಿದೆ.
"ಯುವತಿ ಹಾಗೂ ಕುಟುಂಬಸ್ಥರಿಗೆ ಜೀವ ಬೆದರಿಕೆ ಇರುವುದು ಆಕೆಯ ಹೇಳಿಕೆಯಲ್ಲಿ ತಿಳಿಯುತ್ತದೆ. ರಕ್ಷಣೆ ನೀಡಬೇಕೆಂದು ಕೇಳಿಕೊಂಡಿದ್ದಾಳೆ. ಬಸವರಾಜ್ ಬೊಮ್ಮಾಯಿ ಅವರೆ, ಕೂಡಲೇ ಆಕೆ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆಯ ವ್ಯವಸ್ಥೆ ಮಾಡಿ. ನೊಂದವರ ರಕ್ಷಣೆ ನಿಮ್ಮ ಜವಾಬ್ದಾರಿ. ಆದರೆ ನಿಮ್ಮ ಪಕ್ಷದವರ ರಕ್ಷಣೆಯೇ ನಿಮಗೆ ಮುಖ್ಯವಾದಂತೆ ವರ್ತಿಸುತ್ತಿದ್ದೀರಿ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ವಿಡಿಯೋ ಬಿಡುಗಡೆ ಮಾಡಿದ್ದು ರಮೇಶ್ ಜಾರಕಿಹೊಳಿಯವರೇ ಎಂದು ಯುವತಿ ನೇರವಾಗಿ ಆರೋಪಿಸಿದ್ದಾಳೆ. ಗೃಹ ಇಲಾಖೆ ಮಾಜಿ ಸಚಿವರನ್ನ ಆ ಬಗ್ಗೆ ವಿಚಾರಣೆ ನಡೆಸದೆ ಇನ್ನೂ ಮೀನಾಮೇಷ ಎಣಿಸುತ್ತಿರುವುದೇಕೆ?. ಈ ಸರ್ಕಾರ ತಮ್ಮವರ ರಕ್ಷಣೆಗೆ ನಿಂತಿದಿಯೇ ಹೊರತು ರಾಜ್ಯದ ಜನತೆಯ ರಕ್ಷಣೆಗಲ್ಲ ಎನ್ನುವುದು ಬಿಜೆಪಿ ನಡವಳಿಕೆಗಳಿಂದ ತಿಳಿಯುತ್ತದೆ" ಎಂದಿದೆ.