ನವದೆಹಲಿ, ಮಾ. 14 (DaijiworldNews/HR): ಡಿಎಂಡಿಕೆಯು ಎಐಎಡಿಎಂಕೆ ನೇತೃತ್ವದ ಮೈತ್ರಿಯಿಂದ ಹೊರನಡೆದಿರುವುದರಿಂದ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಜನತಾ ಪಕ್ಷದ ತಮಿಳುನಾಡು ಅಧ್ಯಕ್ಷ ಎಲ್ ಮುರುಗನ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾವು ನಮ್ಮ ಹಿತಾಸಕ್ತಿಗಳನ್ನು ಸಿಇಸಿಗೆ ತಿಳಿಸಿದ್ದು, ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು" ಎಂದರು.
ಇನ್ನು ಮೈತ್ರಿಕೂಟದಿಂದ ಡಿಎಂಡಿಕೆ ಹೊರನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಎಐಎಡಿಎಂಕೆಯು ಮೈತ್ರಿಕೂಟದ ನಾಯಕ. ನಾವು ಮೈತ್ರಿಕೂಟದಲ್ಲಿ ಕಿರಿಯ ಪಾಲುದಾರರಾಗಿದ್ದೇವೆ, ಮೈತ್ರಿಕೂಟಕ್ಕೆ ವಿದಾಯ ಹೇಳುವ ಪಕ್ಷಗಳು ಎಐಎಡಿಎಂಕೆ ಜೊತೆ ಚರ್ಚೆ ನಡೆಸಿದ್ದವು. ಆ ಚರ್ಚೆಗಳ ಬಗ್ಗೆ ನಮಗೆ ತಿಳಿದಿಲ್ಲ" ಎಂದರು.
ಏಪ್ರಿಲ್ 6 ರಂದು 234 ಸದಸ್ಯರ ತಮಿಳುನಾಡು ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.