ನವದೆಹಲಿ, ಮಾ.14 (DaijiworldNews/MB) : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ನಡೆದು ಗಾಯಗಳಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕಿರುವ ಚುನಾವಣಾ ಆಯೋಗವು, ''ಭದ್ರತಾ ಸಿಬ್ಬಂದಿಯ ಲೋಪದಿಂದಾಗಿ ಗಾಯವಾಗಿದೆಯೇ ಹೊರತು ದಾಳಿಯಾಗಿಲ್ಲ'' ಎಂದು ಹೇಳಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಪಶ್ಚಿಮ ಬಂಗಾಳ ರಾಜ್ಯದ ಚುನಾವಣಾ ವೀಕ್ಷಕರು ನೀಡಿದ ವರದಿ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ನಿರ್ಧಾರ ಕೈಗೊಂಡಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ವಾರದ ಆರಂಭದಲ್ಲಿ ಪ್ರಚಾರದ ವೇಳೆ ಗಾಯಗೊಂಡಿದ್ದ ದೀದಿ, ಪ್ರಚಾರದ ವೇಳೆ ಯಾರೋ ನನ್ನನ್ನು ತಳ್ಳಿದ್ದಾರೆ ಎಂದು ಆರೋಪಿಸಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಆದರೆ ಇದು ಕೇವಲ ರಾಜಕೀಯ ಬೂಟಾಟಿಕೆ ಎಂದು ವಿಪಕ್ಷ ನಾಯಕರು ದೂರಿದ್ದರು. ಹಾಗೆಯೇ ಪ್ರತ್ಯಕ್ಷದರ್ಶಿಗಳು ಬ್ಯಾನರ್ಜಿಯವರು ಬಾಗಿಲು ತೆರೆದ ಚಲಿಸುತ್ತಿರುವ ಕಾರಿನಲ್ಲಿ ಮತಯಾಚನೆ ಮಾಡುತ್ತಾ ತೆರಳುತ್ತಿದ್ದ ಸಂದರ್ಭ ಕಾರಿನ ಬಾಗಿಲು ಕಂಬಕ್ಕೆ ಢಿಕ್ಕಿಯಾಗಿ ಹಠಾತ್ ಮುಚ್ಚಿದೆ ಇದರಿಂದಾಗಿ ಸಿಎಂಗೆ ಗಾಯವಾಗಿದೆ ಎಂದು ಹೇಳಿದ್ದರು. ಇವೆಲ್ಲದರ ನಡುವೆ ಈಗ ಮಮತಾ ಬ್ಯಾನರ್ಜಿಯವರು ಮತ್ತೆ ಚುನಾವಣಾ ಪ್ರಚಾರಕ್ಕೆ ಮುಂದೆ ಬಂದಿದ್ದಾರೆ. ಕೋಲ್ಕತ್ತಾದಿಂದ ಹಜ್ರಾದವರೆಗೆ ರೋಡ್ ಶೋ ಕೈಗೊಂಡಿದ್ದು ವೀಲ್ ಚೇರ್ನಲ್ಲಿಯೇ ಕುಳಿತು ಕೋಲ್ಕತ್ತಾದ ಗಾಂಧಿ ಮೂರ್ತಿಯಿಂದ ಪ್ರಚಾರ ಆರಂಭಿಸಿದರು.