ಮೈಸೂರು, ಮಾ.14 (DaijiworldNews/PY): "ರಾಜ್ಯದಲ್ಲಿ ಎಷ್ಟೋ ಮಂದಿ ಮಹಾನ್ ನಾಯಕರಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅವರ ಹೆಸರನ್ನೇ ಏಕೆ ಹೇಳಿದರು ಎಂದು ಗೊತ್ತಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಸಿ.ಡಿ ಪ್ರಕರಣದ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಅವರು, "ಬಿಜೆಪಿಯಲ್ಲೇ ಓರ್ವ ಮಹಾನ್ ನಾಯಕರು ಬೆಳೆಯುತ್ತಿದ್ದಾರೆ. ಅವರು ಯಾವ ಮಹಾನ್ ನಾಯಕರೆಂದು ಹೇಳಿದ್ದಾರೆ ಎಂದು ನನಗೆ ತಿಳಿದಿಲ್ಲ. ಡಿಕೆಶಿ ಅವರು ತಾವೇ ಎಂದು ಏಕೆ ಅಂದುಕೊಂಡರು ತಿಳಿದಿಲ್ಲ" ಎಂದರು.
"ಡಿಕೆಶಿ ಅವರು ಪ್ರಬುದ್ಧ ರಾಜಕಾರಣಿ. ಅವರಿಗಿರುವಷ್ಟು ಅನುಭವ ನಮಗಿಲ್ಲ. ನಿನ್ನೆ ದುಡುಕಿ ಅವರ ಹೆಸರನ್ನೇ ಅವರು ಹೇಳಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಅವರ ಹೆಸರನ್ನು ಏಕೆ ಸಿಲುಕಿಸಿಕೊಳ್ಳಲು ಹೊರಟಿದ್ದಾರೆ ಎನ್ನುವುದು ಗೊತ್ತಿಲ್ಲ" ಎಂದು ಹೇಳಿದರು.
"ಎಲ್ಲರೂ ಈ ಪ್ರಕರಣವನ್ನು ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದು, ಯಾರಿಗೂ ಗಂಭೀರತೆ ಇಲ್ಲ. ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ನಿಷ್ಪಕ್ಷವಾಗಿ ತನಿಖೆ ಮಾಡಬೇಕು. ಹಾಗಾದಲ್ಲಿ ಮಾತ್ರ ರಾಜ್ಯದ ಗೌರವ ಉಳಿಯಲು ಸಾಧ್ಯ" ಎಂದು ತಿಳಿಸಿದರು.