ಜಮ್ಮು, ಮಾ.14 (DaijiworldNews/MB) : ಕಾಶ್ಮೀರ ಕಣಿವೆಯ ಹೊರವಲಯ ಮತ್ತು ಶ್ರೀನಗರದಲ್ಲಿ ಸಕ್ರಿಯರಾಗಿರುವ 9 ಮಂದಿ ವಾಂಟೆಡ್ ಭಯೋತ್ಪಾದಕರ ಪಟ್ಟಿಯನ್ನು ಜಮ್ಮು-ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಶ್ರೀನಗರ, ಕಾಶ್ಮೀರ ಸುತ್ತಮುತ್ತ ಹಲವು ಅಪರಾಧಗಳಿಗೆ ಈ ಉಗ್ರರು ಕಾರಣರಾಗಿದ್ದಾರೆ ಎಂದು ವರದಿಯಾಗಿದೆ. ಇವರು ಹಲವು ಯೋಧರು ಮತ್ತು ನಾಗರಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಕೂಡಾ ಹೇಳಲಾಗಿದೆ.
ಉಗ್ರರ ಪತ್ತೆಗಾಗಿ ಪೊಲೀಸರು ಈಗಾಗಲೇ ಬಲೆ ಬೀಸಿದ್ದಾರೆ. ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇನ್ನು ಜಮ್ಮು ಕಾಶ್ಮೀರದಲ್ಲಿ ಪ್ರತಿದಿನ ಉಗ್ರರ ಬೇಟೆ ನಡೆಯುತ್ತಲೇ ಇದೆ. ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ರಾವಲ್ಪೊರ ಪ್ರದೇಶದಲ್ಲಿ ರವಿವಾರ ನಸುಕಿನಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಓರ್ವ ಉಗ್ರನನ್ನು ಹತ್ಯೆಗೈಯಲಾಗಿದೆ.