ಬೆಂಗಳೂರು, ಮಾ.14 (DaijiworldNews/MB) : ಟೂಲ್ಕಿಟ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಂಧಿಸಿದ ಒಂದು ತಿಂಗಳ ನಂತರ, 22 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಶನಿವಾರ ಸಂಜೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ತನ್ನ ಮೊದಲ ನಾಲ್ಕು ಪುಟಗಳ ಹೇಳಿಕೆಯನ್ನು ಪೋಸ್ಟ್ ಮಾಡಿದ್ದು, ''ಪರಿಸರದ ಬಗ್ಗೆ ಯೋಚಿಸುವುದೇ ತಪ್ಪೆಂದಾಗ ನನಗೆ ಆಶ್ಚರ್ಯವಾಯಿತು'' ಎಂದು ಹೇಳಿದ್ದಾರೆ.
''ಹವಾಮಾನ ನ್ಯಾಯಕ್ಕಾಗಿ ತಾನು ಇನ್ನೂ ಹೋರಾಡುತ್ತಿದ್ದೇನೆ'' ಎಂದು ತನ್ನ ಹೇಳಿಕೆಯಲ್ಲಿ ಪ್ರತಿಪಾದಿಸಿದ ಆಕೆ, ''ಟಿಆರ್ಪಿಗಾಗಿ ಹಸಿದ ಸುದ್ದಿ ಚಾನೆಲ್ಗಳು ನನ್ನನ್ನು ತಪ್ಪಿತಸ್ಥರೆಂದು ಘೋಷಿಸಿದೆ'' ಎಂದು ದೂರಿದರು.
ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಆನ್ಲೈನ್ ದಾಖಲೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಫೆಬ್ರವರಿ 13 ರಂದು ಫೆಬ್ರವರಿ ಬೆಂಗಳೂರಿನಲ್ಲಿ ಬಂಧಿಸಿದ್ದರು. ಆದರೆ, 10 ದಿನಗಳ ನಂತರ ದೆಹಲಿ ನ್ಯಾಯಾಲಯ ಆಕೆಗೆ ಜಾಮೀನು ನೀಡಿತು. ನ್ಯಾಯಾಲಯವು ಸಾಕ್ಷಿ ಇಲ್ಲದ ಹಿನ್ನೆಲೆ ದೆಹಲಿ ಪೊಲೀಸರ ವಿರುದ್ದ ವಾಗ್ದಾಳಿ ನಡೆಸಿತು.
"ತಿಹಾರ್ ಜೈಲಿನಲ್ಲಿದ್ದಾಗ, ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ, ಪ್ರತಿ ಸೆಕೆಂಡಿನ ಬಗ್ಗೆ ನನಗೆ ಅರಿವಿತ್ತು. ನನ್ನನ್ನು ಶೆಲ್ನಲ್ಲಿ ಕೂಡಿ ಬೀಗ ಹಾಕಿದ್ದರು. ಈ ಭೂಮಿಯ ಉಳಿವಿಗಾಗಿ ಹೋರಾಡುವುದು ಯಾವಾಗಿನಿಂದ ಅಪರಾಧವಾಗಿದೆ ಎಂದು ಅಚ್ಚರಿಯಾಯಿತು. ರೈತರಾಗಿದ್ದ ನನ್ನ ಅಜ್ಜಿ ಮತ್ತು ತಾತ ನಾನು ಪರಿಸರ ಹೋರಾಟಗಾರ್ತಿಯಾಗಲು ಪ್ರೇರಣೆಯಾಗಿದ್ದರು'' ಎಂದು ಹೇಳಿದ್ದಾರೆ.
ಇದೇ ವೇಳೆ ತನ್ನ ಬೆಂಬಲಕ್ಕೆ ನಿಂತ ಮತ್ತು ಕಾನೂನು ಹೋರಾಟಕ್ಕೆ ಸಹರಿಸಿದ ಎಲ್ಲರಿಗೂ ದಿಶಾ ರವಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.