ಕೋಲ್ಕತ್ತ, ಮಾ.14 (DaijiworldNews/MB) : ಚುನಾವಣಾ ಪ್ರಚಾರ ಸಂದರ್ಭ ಗಾಯಗೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವೇ ದಿನಗಳಲ್ಲಿ ರವಿವಾರ ಗಾಂಧಿ ಮೂರ್ತಿಯಿಂದ ಹಜ್ರಾಕ್ಕೆ ವೀಲ್ಚೇರ್ನಲ್ಲಿಯೇ ರೋಡ್ ಶೋ ನಡೆಸಲಿದ್ದಾರೆ.
ಈ ವಾರದ ಆರಂಭದಲ್ಲಿ ಪ್ರಚಾರದ ವೇಳೆ ಗಾಯಗೊಂಡಿದ್ದ ದೀದಿ, ಯಾರೋ ನನ್ನನ್ನು ತಳ್ಳಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದು ಕೇವಲ ರಾಜಕೀಯ ಬೂಟಾಟಿಕೆ ಎಂದು ವಿಪಕ್ಷ ನಾಯಕರು ದೂರಿದರು. ಹಾಗೆಯೇ ಪ್ರತ್ಯಕ್ಷದರ್ಶಿಗಳು ಬ್ಯಾನರ್ಜಿಯವರು ಬಾಗಿಲು ತೆರೆದ ಚಲಿಸುತ್ತಿರುವ ಕಾರಿನಲ್ಲಿ ಮತಯಾಚನೆ ಮಾಡುತ್ತಾ ತೆರಳುತ್ತಿದ್ದ ಸಂದರ್ಭ ಕಾರಿನ ಬಾಗಿಲು ಕಂಬಕ್ಕೆ ಢಿಕ್ಕಿಯಾಗಿ ಕಾರಿನ ಬಾಗಿಲು ಹಠಾತ್ ಮುಚ್ಚಿದೆ ಇದರಿಂದಾಗಿ ಸಿಎಂಗೆ ಗಾಯವಾಗಿದೆ ಎಂದು ಹೇಳಿದ್ದರು.
ಇವೆಲ್ಲದರ ನಡುವೆ ಈಗ ಮಮತಾ ಬ್ಯಾನರ್ಜಿಯವರು ಮತ್ತೆ ಚುನಾವಣಾ ಪ್ರಚಾರಕ್ಕೆ ಮುಂದೆ ಬಂದಿದ್ದಾರೆ. ಗಾಯಗೊಂಡ ಬಳಿಕ ಮೊದಲ ಬಾರಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿರುವ ಅವರು, ವೀಲ್ಚೇರ್ನಲ್ಲಿ ಕುಳಿತೇ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ ಹಜ್ರಾದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.