ನವದೆಹಲಿ, ಮಾ.14 (DaijiworldNews/MB) : ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಅವರು, "ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಪಾಕಿಸ್ತಾನಕ್ಕಿಂತ ದೊಡ್ಡ ಬೆದರಿಕೆ" ಎಂದು ಹೇಳಿದ್ದಾರೆ.
"ಇಂದು, ಮೋದಿ ಸರ್ಕಾರವು ಮತ-ಬ್ಯಾಂಕ್ ನೀತಿಯನ್ನು ಮಾತ್ರ ಅರ್ಥಮಾಡಿಕೊಂಡಿದೆ ಎಂದು ನಾವು ಅರಿತುಕೊಂಡಿದ್ದೇವೆ, ಆದ್ದರಿಂದ ನಾವು ಅವರನ್ನು ಚುನಾವಣೆಗಳಲ್ಲಿ ಸೋಲಿಸಬೇಕಾಗಿದೆ. ನಿಮ್ಮ ಕೈಯಲ್ಲಿ ದೊಡ್ಡ ಆಯುಧವಿದೆ - ಅದು ನಿಮ್ಮ ಮತ ಮತ್ತು ನಾನು ನಿಮಗೆ ಮನವಿ ಮಾಡುತ್ತೇನೆ, ಮೋದಿಯನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಮತ ಚಲಾಯಿಸಿ" ಎಂದು ರೈತ ಮುಖಂಡರು ಕೋಲ್ಕತ್ತಾದ 'ಮಹಾಪಂಚಾಯತ್' ಭಾಷಣದ ವೇಳೆ ಮನವಿ ಮಾಡಿದರು.
"ಭಾರತಕ್ಕೆ ದೊಡ್ಡ ಅಪಾಯ ಪಾಕಿಸ್ತಾನವಲ್ಲ ಪ್ರಧಾನಿ ಮೋದಿ ಭಾರತಕ್ಕೆ ದೊಡ್ಡ ಅಪಾಯ" ಎಂದು ಅವರು ಹೇಳಿದರು.
ಇನ್ನು ರೈತ ಮುಖಂಡನ ಈ ಹೇಳಿಕೆಯ ವಿರುದ್ದ ತೀವ್ರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅರ್ಜುನ್ ಸಿಂಗ್ ರಾಜೇವಾಲ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. "ತಮ್ಮ ವಾಕ್ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವ ಸಲುವಾಗಿ, ಪಾಕಿಸ್ತಾನ ಮತ್ತು ಇತರ ದೇಶಗಳನ್ನು ಪ್ರಶಂಸಿಸಲು, ಕೆಟ್ಟ ರಾಜಕೀಯ ಮಾಡುವ ನಾಯಕರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು" ಎಂದು ಆಗ್ರಹಿಸಿದರು.