ಭೋಪಾಲ್, ಮಾ.13 (DaijiworldNews/HR): ಭಾರತದಲ್ಲಿ ಇನ್ನು ಆರಕ್ಕೂ ಅಧಿಕ ಕೊರೊನಾ ಲಸಿಕೆಗಳು ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಈ ಕುರಿತು ಪರಿಸರ ಆರೋಗ್ಯದ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಹೊಸ ಹಸಿರು ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು, "ಇಲ್ಲಿಯವರೆಗೆ 1.84 ಕೋಟಿ ಡೋಸ್ ಕೊರೊನಾ ಲಸಿಕೆ ಪ್ರಮಾಣವನ್ನು ಜನರಿಗೆ ನೀಡಲಾಗಿದ್ದು, 23 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ" ಎಂದರು.
ಇನ್ನು "ಭಾರತವು ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು, ಅದನ್ನು 71 ದೇಶಗಳಿಗೆ ನೀಡಲಾಗಿದೆ. ಇನ್ನೂ ಅನೇಕ ರಾಷ್ಟ್ರಗಳು ಲಸಿಕೆಗಳನ್ನು ಬಯಸುತ್ತಿವೆ ಮತ್ತು ಅವು ಗೊತ್ತಿಲ್ಲದ ದೇಶಗಳೇನು ಅಲ್ಲ. ಕೆನಡಾ, ಬ್ರೆಜಿಲ್ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳು ಭಾರತೀಯ ಲಸಿಕೆಗಳನ್ನು ಬಹಳ ಉತ್ಸಾಹದಿಂದ ಬಳಸುತ್ತಿವೆ" ಎಂದಿದ್ದಾರೆ.
"ಶನಿವಾರ ಮುಂಜಾನೆಯವರೆಗೂ ದೇಶದಲ್ಲಿ 1.84 ಕೋಟಿ ಕೊರೊನಾ ಲಸಿಕೆ ಡೋಸ್ಗಳನ್ನು ನೀಡಲಾಗಿದ್ದು, ಶುಕ್ರವಾರ ಒಂದೇ ದಿನ 20 ಲಕ್ಷ ಜನರಿಗೆ ಚುಚ್ಚುಮದ್ದು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು 'ವಿಶ್ವ ಗುರು' (ವಿಶ್ವ ನಾಯಕ) ಆಗಿ ಪರಿವರ್ತಿಸಲು ಬಯಸುತ್ತಾರೆ" ಎಂದು ಹೇಳಿದ್ದಾರೆ.