ಹುಬ್ಬಳ್ಳಿ, ಮಾ.13 (DaijiworldNews/PY): "ನಾಯಕರೊಳಗಿನ ಆಂತರಿಕ ಕಲಹ ಮುಚ್ಚಿ ಹಾಕುವ ಸಲುವಾಗಿ ಕಾಂಗ್ರೆಸ್ಸಿಗರು ಯಾತ್ರೆ ಪ್ರಾರಂಭಿಸಿದ್ದಾರೆ" ಎಂದು ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.
ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾಯಕರೊಳಗಿನ ಆಂತರಿಕ ಕಲಹವನ್ನು ಮುಚ್ಚಿ ಹಾಕಲು, ಪಕ್ಷದ ಮುಖ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ಸಿಗರು ಯಾತ್ರೆ ಪ್ರಾರಂಭಿಸಿದ್ದಾರೆ" ಎಂದು ಲೇವಡಿ ಮಾಡಿದರು.
"ಕಾಂಗ್ರೆಸ್ 2014ರ ಬಳಿಕ ಐದಾರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಕೈ ಪಕ್ಷದ ಅನೇಕ ನಾಯಕರು ಬಿಜೆಪಿ ಹಾಗೂ ವಿವಿಧ ಪಕ್ಷಗಳಿಗೆ ಹೋಗಿದ್ದಾರೆ. ಪಕ್ಷದ ಕಲಹ ಮುಚ್ಚಿಹಾಕಲು, ನಾವೆಲ್ಲ ಒಂದೇ ತೋರಿಸಲು ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ" ಎಂದು ಹೇಳಿದರು.
"ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡುವಿನ ತಿಕ್ಕಾಟದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿಯತ್ತ ಸಾಗಿದೆ" ಎಂದು ತಿಳಿಸಿದರು.
"ಭದ್ರಾವತಿಯ ಕಾರ್ಖಾನೆ ಸಮಸ್ಯೆಯ ವಿಚಾರದ ಬಗ್ಗೆ ಸದನದಲ್ಲಿ ಮಾತನಾಡದ ಶಾಸಕ ಸಂಗಮೇಶ ಅವರು ಯುವಕರ ವಿರುದ್ದ ಹಲ್ಲೆ ಪ್ರಕರಣ ದಾಖಲಿಸಿದ ಕಾರಣ ಸದನದಲ್ಲಿ ಅಂಗಿ ಬಿಚ್ಚಿದ್ದು, ಇದರಿಂದ ಸದನದ ಘನತೆ ಹಾಳು ಮಾಡಿದ್ದಾರೆ. ಸ್ವಾರ್ಥಕ್ಕೋಸ್ಕರ ಸದನದಲ್ಲಿ ಅಂಗಿ ಬಿಚ್ಚಿದ ಶಾಸಕನ ಪರ ಕೈ ನಾಯಕರು ಹೋರಾಟಕ್ಕೆ ತಯಾರಾಗಿರುವುದು ನಾಚಿಕೆಗೇಡಿನ ವಿಚಾರ" ಎಂದು ಹೇಳಿದರು.