ನವದೆಹಲಿ, ಮಾ.13 (DaijiworldNews/MB): ಕೊರೊನಾ ಲಾಕ್ಡೌನ್ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಕಾಯುತ್ತಿರುವ ಸಂದರ್ಭದಲ್ಲಿ ಏರುತ್ತಿರುವ ಇಂಧನ ಬೆಲೆಗಳು ಭಾರತದಲ್ಲಿನ ಬೇಡಿಕೆಯ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತಿವೆ.
ಅಧಿಕೃತ ಮಾಹಿತಿಯ ಪ್ರಕಾರ, ಫೆಬ್ರವರಿಯಲ್ಲಿ ಸತತ ಎರಡನೇ ತಿಂಗಳು ದೇಶದ ಇಂಧನ ಬಳಕೆ ತೀವ್ರವಾಗಿ ಕುಸಿದಿದೆ. ಫೆಬ್ರವರಿಯಲ್ಲಿ ಕಡಿಮೆಗೊಂಡ ಇಂಧನ ಬೇಡಿಕೆಯು ಸೆಪ್ಟೆಂಬರ್ನಿಂದ ಈವರೆಗಿನ ಅತ್ಯಂತ ಕಡಿಮೆಯದ್ದಾಗಿದೆ.
ಇಂಧನ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಕೋಶ (ಪಿಪಿಎಸಿ) ಪ್ರಕಾರ, ಇಂಧನ ಬಳಕೆ (ಹೆಚ್ಚಾಗಿ ಪೆಟ್ರೋಲ್ ಮತ್ತು ಡೀಸೆಲ್) ಫೆಬ್ರವರಿಯಲ್ಲಿ ಶೇ 4.9 ರಷ್ಟು ಇಳಿದು 17.2 ಮಿಲಿಯನ್ ಟನ್ಗಳಿಗೆ ತಲುಪಿದೆ. ಮಾಸಿಕ ಆಧಾರದ ಮೇಲೆ ಬೇಡಿಕೆಯು ಶೇಕಡಾ 4.6 ರಷ್ಟು ಕುಸಿದಿದೆ.
ಡೀಸೆಲ್ ಬಳಕೆಯ ದತ್ತಾಂಶದ ನೋಡುವಾಗ ಚೇತರಿಕೆ ಇನ್ನೂ ದೂರದಲ್ಲಿದೆ ಎಂದು ಭಾಸವಾಗುತ್ತದೆ. ದೇಶದಲ್ಲಿ ಸರಕು ಸಾಗಾಣೆಗೆ ಮುಖ್ಯವಾದ ಡಿಸೇಲ್ ಬೆಲೆ ಏರಿಕೆಯು ದೇಶದಲ್ಲಿ ಬಾರೀ ಸಂಕಷ್ಟ ಉಂಟು ಮಾಡಿದೆ. ಭಾರತದಲ್ಲಿ ಒಟ್ಟಾರೆ ಸಂಸ್ಕರಿಸಿದ ಇಂಧನ ಶೇಕಡಾ 40 ರಷ್ಟು ಮಾರಾಟವಾಗಿದೆ. ಫೆಬ್ರವರಿಯಲ್ಲಿ ಡೀಸೆಲ್ ಬಳಕೆ ಶೇಕಡಾ 3.8 ರಷ್ಟು ಕುಸಿದು 6.55 ಮಿಲಿಯನ್ ಟನ್ಗೆ ತಲುಪಿದೆ ಮತ್ತು ತಿಂಗಳ ಆಧಾರದ ಮೇಲೆ ಶೇಕಡಾ 8.5 ರಷ್ಟು ಕುಸಿದಿದೆ.
ಮತ್ತೊಂದೆಡೆ, ಪೆಟ್ರೋಲ್ ಮಾರಾಟವು ಫೆಬ್ರವರಿಯಲ್ಲಿ ಶೇ 6.5 ರಷ್ಟು ಕುಸಿದು 2.44 ದಶಲಕ್ಷ ಟನ್ಗಳಿಗೆ ತಲುಪಿದೆ ಮತ್ತು ಹಿಂದಿನ ವರ್ಷಕ್ಕಿಂತ ಶೇಕಡಾ 3 ರಷ್ಟು ಕುಸಿದಿದೆ.
ಪೆಟ್ರೋಲ್ ಮತ್ತು ಡೀಸೆಲ್ನ ಬೆಲೆ 2021 ರಲ್ಲಿ 26 ಪಟ್ಟು ಏರಿಕೆಯಾಗಿ ವರ್ಷದಲ್ಲಿ ಕ್ರಮವಾಗಿ 7.46 ರೂ ಮತ್ತು 7.60 ರೂ. ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆಯು ಹಲವಾರು ನಗರಗಳಲ್ಲಿ ಲೀಟರ್ 100 ರೂ. ಯನ್ನು ದಾಟಿದೆ.
ಏತನ್ಮಧ್ಯೆ ಆಟೋ ಗ್ಯಾಸ್, ಎಲ್ಪಿಜಿ ಸಿಲಿಂಡರ್ಗಳ ಮಾರಾಟವು ಫೆಬ್ರವರಿಯಲ್ಲಿ ಶೇಕಡಾ 7.6 ರಷ್ಟು ಏರಿಕೆಯಾಗಿ 2.27 ದಶಲಕ್ಷ ಟನ್ಗಳಿಗೆ ತಲುಪಿದೆ. ಉಜ್ವಲ ಗ್ರಾಹಕರಿಗೆ ಉಚಿತ ಸಂಪರ್ಕ ಅಥವಾ ಸರ್ಕಾರದ ಸಬ್ಸಿಡಿಗಳ ಕಾರಣದಿಂದಾಗಿ ಹೀಗಾಗಿದೆ.