ಲಕ್ನೋ, ಮಾ.13 (DaijiworldNews/PY): "ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ವಿರುದ್ದದ ಪ್ರಕರಣಗಳನ್ನು ಒಂದೊಂದಾಗಿ ರದ್ದುಪಡಿಸಿಕೊಳ್ಳುತ್ತಿದ್ದಾರೆ" ಎಂದು ಬಿಎಸ್ಪಿ ಸಂಸದ ಅಫ್ಜಲ್ ಅನ್ಸಾರಿ ಆರೋಪಿಸಿದ್ದಾರೆ.
ಬಲ್ಲಿಯಾ ಜಿಲ್ಲೆಯ ಬೆಳ್ತಾರಾ ರಸ್ತೆಯಲ್ಲಿ ನಡೆದ ಕಾರ್ಯವೊಂದರಲ್ಲಿ ಮಾತನಾಡಿದ ಅವರು, "ಈಗಾಗಲೇ ಉತ್ತರಪ್ರದೇಶ ರಾಜ್ಯವನ್ನು ನಾಲ್ಕು ಭಾಗಗಳಾಗಿ ಮಾಡಿದೆ. ಬಿಜೆಪಿ ದ್ವೇಷದ ರಾಜಕೀಯದಲ್ಲಿ ತೊಡಗಿಕೊಂಡಿದ್ದು, ಈ ಕಾರಣದಿಂದ ಹಲವು ವರ್ಷಗಳಿಂದ ದೇಶದ ಸಾಮಾಜಿಕ ಸಾಮರಸ್ಯವನ್ನು ನಾಶ ಮಾಡುತ್ತಿದೆ" ಎಂದು ಕಿಡಿಕಾರಿದ್ದಾರೆ.
"ಮಾಫಿಯಾದ ಮೇಲೆ ಬುಲ್ಡೋಜರ್ ಹರಿಸುವುದಾಗಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಆದರೆ, ತಮ್ಮ ವಿರುದ್ದದ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವಿರುದ್ದ ದಾಖಲಾಗಿರುವ ಕ್ರಿಮಿನಲ್ ಕೇಸ್ಗಳನ್ನು ಒಂದೊಂದಾಗಿ ರದ್ದು ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಇದು ವಿರುದ್ದವಾಗಿದೆ" ಎಂದು ಹೇಳಿದ್ದಾರೆ.
ಇದೇ ಸಂದರ್ಭ ಯೋಗಿ ಆದಿತ್ಯನಾಥ್ ಅವರ ವಿರುದ್ದ ಗಂಭೀರ ಆರೋಪ ಮಾಡಿರುವ ಅಫ್ಜಲ್ ಅನ್ಸಾರಿ, "ಯೋಗಿ ಆದಿತ್ಯನಾಥ್ ಅವರು ಅಧಿಕಾರಕ್ಕೆ ಬಂದ ಬಳಿಕ ತಮ್ಮ ವಿರುದ್ದ ಪ್ರಕರಣಗಳನ್ನು ಒಂದೊಂದಾಗಿ ರದ್ದುಪಡಿಸುತ್ತಿದ್ದಾರೆ. ಇದರ ಮುಖೇನ ಅವರು ಮಿಸ್ಟರ್ ಕ್ಲೀನ್ ಎನ್ನುವ ಬಿರುದು ಪಡೆದುಕೊಳ್ಳಲು ತಯಾರಾಗುತ್ತಿದ್ದಾರೆ" ಎಂದು ಹೇಳಿದ್ದಾರೆ.