ಬೆಳಗಾವಿ, ಮಾ.13 (DaijiworldNews/MB): ''ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವು ರೈತರಿಗೆ ಆಗುವ ಸಮಸ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ ಕೂಡಿದೆಯೇ ಹೊರತು ಅದು ಸರ್ಕಾರದ ವಿರುದ್ದವೂ ಅಲ್ಲ, ಕಾಂಗ್ರೆಸ್ ಪರವೂ ಅಲ್ಲ'' ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ದೇಶದೆಲ್ಲೆಡೆ ರೈತ ಸಂಘಟನೆಗೆ ಬೇರೆ ವಲಯದವರೂ ಕಾರ್ಮಿಕರೂ ಸೇರಿದ್ದು ಚಳುವಳಿಗೆ ಇನ್ನಷ್ಟು ಬಲ ತುಂಬಿದ್ದಾರೆ. ಆದರೆ ಸರ್ಕಾರ ಯಾವುದಕ್ಕೂ ಬಗ್ಗುತ್ತಿಲ್ಲ. ಉತ್ತರ ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸರ್ಕಾರದ ಸ್ಪಂದನೆ ಏನೆಂದು ಜನರು ತಿಳಿದಿದ್ದಾರೆ. ಆ ಚಳಿಯಲ್ಲೂ ರೈತರು ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಇನ್ನು ದಕ್ಷಿಣ ಭಾರತಕ್ಕೂ ಚಳುವಳಿಯನ್ನು ವಿಸ್ತರಿಸುತ್ತಿದ್ದೇವೆ'' ಎಂದು ತಿಳಿಸಿದರು.
''ಮೊದಲು ಮೂರು ಕಡೆಗಳಲ್ಲಿ ರೈತರ ಮಹಾಪಂಚಾಯತ್ ನಡೆಸಲಾಗುತ್ತಿದೆ. ರೈತರ ಅಸ್ತಿತ್ವಕ್ಕಾಗಿ ಈ ಹೋರಾಟ ಅನಿವಾರ್ಯ. ಇದು ಕೇವಲ ರೈತರ ಹೋರಾಟವಲ್ಲ. ಇಡೀ ಸಮಾಜದ ಒಂದು ಚಳುವಳಿ ಎಂದು ಹೇಳಿದ ಅವರು, ಬೆಲೆ ಏರಿಕೆಯಿಂದಾಗಿ ಜನರಿಗೆ ಸಮಸ್ಯೆ ಉಂಟಾಗಿಲ್ಲವೇ'' ಎಂದು ಪ್ರಶ್ನಿಸಿದರು.
''ರೈತರ ಹೋರಾಟ ಬೇರೆ ಬೇರೆ ಸ್ವರೂಪದಲ್ಲಿ ಮುಂದುವರಿದಿದ್ದರೂ ಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ ಪ್ರತಿಭಟನಾ ನಿರತ ರೈತರ ವಿರುದ್ದ ಅಪಪ್ರಚಾರ ಮಾಡಲಾಗುತ್ತಿದೆ'' ಎಂದು ದೂರಿದರು.
''ಚಳುವಳಿ ಮಾಡುತ್ತಿರುವವರನ್ನು ರೈತರಲ್ಲ, ಅವರಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬಿತ್ಯಾದಿ ಅಪಪ್ರಚಾರವನ್ನು ರೈತರ ವಿರುದ್ದವಾಗಿ ಮಾಡಲಾಗುತ್ತಿದೆ'' ಎಂದು ಆರೋಪಿಸಿದರು.