ಮೀರತ್, ಮಾ.13 (DaijiworldNews/HR): ಮೀರತ್ನ ಜನಜಂಗುಲಿರುವ ಮಾರುಕಟ್ಟೆಯಲ್ಲಿ ಕಿರುಕುಳ ನೀಡುತ್ತಿದ್ದ ಯುವಕ ಕ್ಷಮೆಯಾಚಿಸಲು ಮುಂದಾದಾಗ ಕೋಪಗೊಂಡ ಶಾಲಾ ವಿದ್ಯಾರ್ಥಿನಿಯೊಬ್ಬಳು ಯುವಕನಿಗೆ ಕೋಲಿನಿಂದ ಹೊಡೆದ ಘಟನೆ ನಡೆದಿದ್ದು, ಇದೀಗ ವಿಡಿಯೋವು ವೈರಲ್ ಆಗಿದೆ.
ವೀಡಿಯೊದಲ್ಲಿ ಯುವತಿಯು ಕೋಲಿನಿಂದ ಹೊಡೆಯುವಾಗ, "ನೀವು ನಮಗೆ ಎಷ್ಟು ಕಿರುಕುಳ ನೀಡುತ್ತೀರಿ" ಎಂದು ಹುಡುಗಿ ಪದೇ ಪದೇ ಹೇಳುವುದನ್ನು ಕೇಳಬಹುದು.
ಇನ್ನು "ಕೆಲವು ದಿನಗಳಿಂದ ನಾನು ಮತ್ತು ನನ್ನ ಸ್ನೇಹಿತೆ ರಸ್ತೆಯಲ್ಲಿ ಹೋಗುವಾಗ ಕಿರುಕುಳ ನೀಡುತ್ತಿದ್ದಾನೆ, ನಮ್ಮ ಫೋನ್ ಸಂಖ್ಯೆಗಳನ್ನು ಕೇಳುತ್ತಿದ್ದ" ಎಂದು ಹುಡುಗಿ ಆರೋಪಿಸಿದ್ದಾಳೆ.
ಎಸ್ಪಿ (ನಗರ) ವಿನೀತ್ ಭಟ್ನಾಗರ್, "ನಾವು ಯುವಕರನ್ನು ವಶಕ್ಕೆ ಪಡೆದಿದ್ದೇವೆ. ಬಾಲಕಿಯಿಂದ ದೂರು ಬಂದ ನಂತರ ಎಫ್ಐಆರ್ ದಾಖಲಿಸಲಾಗುವುದು" ಎಂದು ತಿಳಿಸಿದ್ದಾರೆ.
ಮೀರತ್ನ ಸದರ್ ಪ್ರದೇಶದಲ್ಲಿ ಇಬ್ಬರು ಶಾಲಾ ಬಾಲಕಿಯರನ್ನು ಯುವಕರು ಕೆಲ ದಿನಗಳಿಂದ ಹಿಂಬಾಲಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಆತ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹುಡುಗಿಯರಿಗಾಗಿ ಕಾಯುತ್ತಿದ್ದನು ಎನ್ನಲಾಗಿದೆ.
ಇನ್ನು ಆತ ಆಕೆಯ ಬಳಿ ಕ್ಷಮೆ ಯಾಚಿಸಲು ಮುಂದಾದಾಗ ಕಿರುಕುಳ ನೀಡುತ್ತಿದ್ದ ಯುವಕನಿಗೆ ಬಾಲಕಿ ಕಪಾಳಮೋಕ್ಷ ಮಾಡಿದ್ದಾಳೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಪೊಲೀಸರಿಂದ ಲಾಠಿ ತೆಗೆದುಕೊಂಡು ಅವನನ್ನು ಥಳಿಸಿದ್ದಾಳೆ.
ಸಾರ್ವಜನಿಕರು ಆಕೆಯ ಧೈರ್ಯವನ್ನು ಪ್ರಸಂಶಿಸಿದ್ದು, ಬಳಿಕ ಪೊಲೀಸರು ಮೀರತ್ನ ಕಂಕರ್ಖೇರಾ ಪ್ರದೇಶದ ಶುಭಮ್ ಕುಮಾರ್ ಮತ್ತು ಅರುಣ್ ಮೆಹಂದಿ ಎಂದು ಗುರುತಿಸಲ್ಪಟ್ಟ ಇಬ್ಬರು ಯುವಕರನ್ನು ಕರೆದೊಯ್ದರು.
ಇನ್ನು ಕೆಲವು ನೋಡುಗರು ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಎನ್ನಲಾಗಿದೆ.