ಬೆಂಗಳೂರು, ಮಾ 13 (DaijiworldNews/MS): ರಮೇಶ್ ಜಾರಕಿಹೊಳಿ ಅವರ 'ಸಿಡಿ' ಬಿಡುಗಡೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಭಾರತೀಯ ಜನತಾ ಪಾರ್ಟಿಗೆ ಈ ಘಟನೆ ತೀವ್ರ ಮುಜುಗುರವನ್ನು ತಂದಿಟ್ಟಿದೆ. ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ - ಬಿಜೆಪಿ ವಾಕ್ಸಮರವನ್ನು ಮಾಡುತ್ತಿದೆ.
ಇನ್ನೊಂದೆಡೆ ನಕಲಿ ಸಿಡಿ, ಇದೊಂದು ರಾಜಕೀಯ ಷಡ್ಯಂತ್ರ , ನಾನು ನಿರಪರಾಧಿ ಹೇಳುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ರಮೇಶ್ ಜಾರಕಿಹೊಳಿ ಪೊಲೀಸ್ ದೂರು ದಾಖಲಿಸಿಲ್ಲ. ಜಾರಕಿಹೊಳಿಯವರ ಈ ನಡೆ ಸಂಶಯಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ ಸಂಗತಿಗಳು. ಒಂದು ಲಂಚ, ಮತ್ತೊಂದು ಮಂಚ!. ಸಿಡಿ ನಿಜಕ್ಕೂ ನಕಲಿಯೇ ಆಗಿದ್ದರೆ ರಮೇಶ್ ಜಾರಕಿಹೊಳಿ ಅವರು ದೂರು ನೀಡಲು ಮೀನಾಮೇಷ ಎಣಿಸುತ್ತಿರುವುದೇಕೆ? ಖಾಸಗಿ ಏಜೆನ್ಸಿಗಳ ಮೊರೆ ಹೋಗುವುದೇಕೆ? ಸರ್ಕಾರಿ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲವಾ ಅಥವಾ ಬಿಜೆಪಿ ತಿಕ್ಕಾಟದಲ್ಲಿ ತಾವೇ ಬಲಿಯಾಗುವ ಭಯ ರಮೇಶ್ ಜಾರಕಿಹೊಳಿ ಅವರನ್ನು ಕಾಡುತ್ತಿದೆಯಾ ಎಂದು ಕೆಪಿಸಿಸಿ ಪ್ರಶ್ನೆ ಮಾಡಿದೆ.