ಕೋಲ್ಕತಾ, ಮಾ.13 (DaijiworldNews/MB): ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಮಧ್ಯರಾತ್ರಿಯಲ್ಲಿ ಯುವಕನೊಬ್ಬ 21 ವರ್ಷದ ಯುವತಿಗೆ ಕಿರುಕುಳ ನೀಡಿದ್ದು ಯುವತಿಯನ್ನು ರಕ್ಷಿಸುವ ಮೂಲಕ ಟ್ಯಾಕ್ಸಿ ಡ್ರೈವರ್ ಹೀರೋ ಆಗಿ ಹೊರಹೊಮ್ಮಿದ್ದಾರೆ.
ಮಥುರ್ಬಾಬು ಲೇನ್ನಲ್ಲಿ ಬುಧವಾರ ಮುಂಜಾನೆ 2 ಗಂಟೆಗೆ ಕ್ಯಾಬ್ ಚಾಲಕ ಪ್ರಯಾಣಿಕರಿಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಚಾಲಕನನ್ನು ಪ್ರಭುನಾಥ್ ಶಾ ಎಂದು ಗುರುತಿಸಲಾಗಿದೆ.
ಪ್ರಭುನಾಥ್ ಶಾ ಯುವಕ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದನು. ಆದರೆ ಟ್ಯಾಕ್ಸಿ ಡ್ರೈವರ್ ತನ್ನ ಪ್ರಾಣ ಲೆಕ್ಕಿಸದೆ ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ.
ಪೊಲೀಸರು ಈಗ ಸೂರಜ್ ಕುಮಾರ್ ಭುಯಾ ಎಂದು ಗುರುತಿಸಲ್ಪಟ್ಟ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೆಯೇ ಆತನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
"ಮಹಿಳೆ ತನ್ನ ಮನೆಯಿಂದ ಟ್ಯಾಕ್ಸಿ ಬಾಡಿಗೆಗೆ ಪಡೆದಿದ್ದಳು. ಆಕೆ ತನ್ನ ಸ್ನೇಹಿತರಿಗಾಗಿ ಕಾಯುತ್ತಿದ್ದಳು. ಈ ಸಂದರ್ಭ ಪಾನಮತ್ತನಾಗಿ ಬಂದ ಯುವಕ ಆಕೆಗೆ ಕಿರುಕುಳ ನೀಡಿದ್ದು ಟ್ಯಾಕ್ಸಿ ಚಾಲಕ ಆಕ್ಷೇಪ ವ್ಯಕ್ತಪಡಿಸಿದಾಗ ಟ್ಯಾಕ್ಸಿ ಡ್ರೈವರ್ ಜೊತೆ ವಾಗ್ವಾದ ನಡೆಸಿದ್ದಾನೆ. ಆರೋಪಿ ಯುವತಿಯ ಮೈ ಮುಟ್ಟಲು ಕೂಡಾ ಪ್ರಯತ್ನಿಸಿದ್ದು ಆದರೆ ಚಾಲಕ ಟ್ಯಾಕ್ಸಿಯಿಂದ ಇಳಿದು ಅವನ ಜೊತೆ ಕಾದಾಟಕ್ಕೆ ಇಳಿದರು. ಬಳಿಕ ಆರೋಪಿ ಶಾ ಮೇಲೆ ಹಲ್ಲೆ ನಡೆಸಿದ್ದಾನೆ'' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.