ಕೋಲ್ಕತಾ, ಮಾ.13 (DaijiworldNews/MB): ''ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಿಎಂ ಸ್ಥಾನದಿಂದ 'ವಿಸರ್ಜನೆ' ಮಾಡಲು ರಾಜ್ಯದ ಜನರು ಸಿದ್ಧರಾಗಿದ್ದಾರೆ'' ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ದಿಲೀಪ್ ಘೋಷ್ ಶನಿವಾರ ಹೇಳಿದರು.
ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಇದುವರೆಗೆ ತನ್ನ 59 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
"ನಾವು ಚುನಾವಣೆಯ ಮೊದಲ ಎರಡು ಹಂತಗಳಿಗೆ ಅಭ್ಯರ್ಥಿಗಳನ್ನು ನಿರ್ಧರಿಸಿದ್ದೇವೆ. ಮುಂದಿನ ಮೂರು ಹಂತಗಳಿಗೆ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲಿದ್ದೇವೆ. ಜನರು ಮಮತಾ ಬ್ಯಾನರ್ಜಿಯ 'ವಿಸರ್ಜನೆ'ಗೆ ಸಿದ್ಧರಾಗಿದ್ದಾರೆ'' ಎಂದು ಘೋಷ್ ಹೇಳಿದರು.
ಖರಗ್ಪುರ ಸದರ್ನ ಹಿರಣ್ಮೊಯ್ ಚಟ್ಟೋಪಾಧ್ಯಾಯ ಮತ್ತು ಬಾರ್ಜೋರಾದ ಸುಪ್ರತಿ ಚಟರ್ಜಿ ಎಂಬ ಇಬ್ಬರು ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಜೆಪಿ ಬಿಡುಗಡೆ ಮಾಡಿತ್ತು. ಕಳೆದ ವಾರ, ಚುನಾವಣೆಗೆ 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷ ಘೋಷಿಸಿದೆ.
ಏತನ್ಮಧ್ಯೆ ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳು ತಮ್ಮ ಚುನಾವಣಾ ಪ್ರಚಾರವನ್ನು ರಾಜ್ಯದಲ್ಲಿ ಪ್ರಾರಂಭಿಸಿರುವುದರಿಂದ ಪಶ್ಚಿಮ ಬಂಗಾಳದ ರಾಜಕೀಯ ವಾತಾವರಣ ಉದ್ವಿಗ್ನಗೊಳ್ಳುತ್ತಿದೆ.