ನವದೆಹಲಿ, ಮಾ 13 (DaijiworldNews/MS): ಕೇಂದ್ರ ಸರ್ಕಾರ ಜಾರಿ ಮಾಡಿದ ರೈತ ಕಾನೂನುಗಳನ್ನು ವಿರೋಧಿಸಿ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು ಇನ್ನಷ್ಟು ದೀರ್ಘ ಕಾಲ ಹೋರಾಟ ರೂಪಿಸಿರುವುದರಿಂದ ಪ್ರತಿಭಟನಾಕಾರರನ್ನು ರಕ್ಷಿಸಲು ಎರಡಂತಸ್ತಿನ ಮನೆ ನಿರ್ಮಾಣ ಮಾಡತೊಡಗಿದ್ದಾರೆ.
ಕೇಂದ್ರದ ವಿರುದ್ದ ತಮ್ಮ ಆಂದೋಲನದ 106 ನೇ ದಿನದಂದು, ಬೇಸಿಗೆಯ ಬೇಗೆಯನ್ನು ಎದುರಿಸಲು, , ರೈತರು ಸಿಂಘು ಗಡಿಯಲ್ಲಿ 'ವ್ಯವಸ್ಥಿಯ' ಮನೆಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ. ಸಿಂಗು ಗಡಿಯಲ್ಲಿರುವ ಪ್ರತಿಭಟನಾ ಸ್ಥಳಕ್ಕಿಂತ ಕೆಲವು ಕಿಲೋಮೀಟರ್ ಮುಂದಕ್ಕೆ ಚಲಿಸಿದಾಗ ಈ ಮನೆಗಳನ್ನು ಸುಲಭವಾಗಿ ಕಾಣಬಹುದು.
ಈ ಹಿಂದೆ ರೈತರು ಡೇರೆ ಹಾಕಿದ್ದ ಸ್ಥಳಗಳಲ್ಲಿ ಈಗ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮನೆ ನಿರ್ಮಾಣಕ್ಕಾಗಿ ಇಟ್ಟಿಗೆ ಮುಂತಾದ ಕಚ್ಚಾವಸ್ತು ಹಾಗೂ ಗಾರೆ ಕೆಲಸಗಾರರನ್ನು ಪಂಜಾಬ್ನಿಂದ ಕರೆಸಲಾಗಿದೆ.
"ಸುಡುಬಿಸಿಲಿನಿಂದ ಪ್ರತಿಭಟನಾಕಾರರನ್ನು ರಕ್ಷಿಸಬೇಕಾಗಿದೆ. ಈಗಾಗಲೇ ಗಡಿಯಲ್ಲಿ ನಾಲ್ಕು ಮನೆಗಳನ್ನು ನಿರ್ಮಿಸಲಾಗಿದೆ, ಆದರೆ ಅವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಎಲ್ಲಾ ಮನೆಗಳು ಎರಡು ಅಂತಸ್ತಿನವುಗಳಾಗಿವೆ. ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಇರುವುದರಿಂದ, ಈ ಎರಡು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಆಂದೋಲನವನ್ನು ಇನ್ನಷ್ಟು ದೀರ್ಘಗೊಳಿಸಿದರೆ, ನಮ್ಮ ಸಿದ್ಧತೆಗಳು ಬಲವಾಗಿರಬೇಕು." ಎಂದು ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್ಕೆಎಂ) ನ ಮಾಧ್ಯಮ ಘಟಕವನ್ನು ನೋಡಿಕೊಳ್ಳುವ ಕರಮ್ಜಿತ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರತಿಭಟನಾ ಸಮೀಪದ ಸರ್ಕಾರಿ ಜಾಗದಲ್ಲಿ ಮನೆ ಕೆಲಸ ಆರಂಭವಾಗಿದೆ. 60×20 ಅಳತೆಯ ಮನೆ ನಿರ್ಮಿಸಲಾಗುತ್ತಿದ್ದು, ನೆಲಮಹಡಿಯಲ್ಲಿ ಮೂರು ಕೊಠಡಿಗಳು ಮತ್ತು ಮೊದಲ ಮಹಡಿಯಲ್ಲಿ ಒಂದು ವಿಶಾಲ ಹಾಲ್ ಹೊಂದಿದೆ. ಮಹಡಿಗೆ ಕಾಂಕ್ರೀಟ್ ಬಳಸುವ ಬದಲು ಕಬ್ಬಿಣ ಮತ್ತು ಮರವನ್ನು ಉಪಯೋಗಿಸಲಾಗಿದೆ. ಹಾಗೆ ಈ ಮನೆಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕೋರಲಾಗಿದೆ, ಒಂದು ವೇಳೆ ಸಂಪರ್ಕ ನೀಡದಿದ್ದರೆ ಜನರೇಟರ್ ಬಳಸಲು ಸಹ ನಿರ್ಧರಿಸಿದ್ದಾರೆ. ಈ ಮನೆ ಚಳಿಯ ರಾತ್ರಿ ಮತ್ತು ಬೇಸಿಗೆಯಲ್ಲಿ ಪ್ರತಿಭಟನಾಕಾರರನ್ನು ರಕ್ಷಿಸಲಿದೆ ಎಂದು ಸಂಘಟಕರು ಹೇಳಿದ್ದಾರೆ.
ಈ ಮೊದಲು, ರೈತರು ಗಡಿಯಲ್ಲಿ ಪ್ಲಾಸ್ಟಿಕ್ ಡೇರೆಗಳನ್ನು ಸ್ಥಾಪಿಸಿದ್ದರು. ಇದರಲ್ಲಿ ಅವರು ಚಳಿಗಾಲದ ಶೀತ ಗಾಳಿಯನ್ನು ತಡೆದರೂ, ಬೇಸಿಗೆಯ ಆರಂಭವಾಗುತ್ತಿದ್ದಂತೆ, ಈ ಡೇರೆಗಳಲ್ಲಿ ಉಳಿಯಲು ಕಷ್ಟವಾಗುತ್ತದೆ. ರಾತ್ರಿಯಲ್ಲಿ ಸೊಳ್ಳೆಗಳು ಮತ್ತು ಹಗಲಿನಲ್ಲಿ ಸುಡುವ ಬಿಸಿಲಿನಿಂದ ರಕ್ಷಿಸಲು ಗಡಿಯಲ್ಲಿ ' ವ್ಯವಸ್ಥಿತ' ಮನೆಗಳನ್ನು ನಿರ್ಮಿಸಲು ರೈತರು ಮುಂದಾಗಿದ್ದಾರೆ.