ಕೋಲ್ಕತ್ತ, ಮಾ.13 (DaijiworldNews/PY): ನಂದಿ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭ ಅಪರಿಚಿತರು ತಳ್ಳಿದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಈ ಬಗ್ಗೆ ಎಸ್ಎಸ್ಕೆಂ ಆಸ್ಪತ್ರೆಯ ವೈದ್ಯರ ತಂಡ ಮಾಹಿತಿ ನೀಡಿದ್ದು, "ನಂದಿಗ್ರಾಮದಲ್ಲಿ ಮಮತಾ ಅವರ ಕಾಲು ಹಾಗೂ ಭುಜಕ್ಕೆ ಗಾಯಗಳಾಗಿತ್ತು. ಅವರಿಗೆ ಕನಿಷ್ಠ ಏಳು ದಿನಗಳ ಚಿಕಿತ್ಸೆ ಅಗತ್ಯವಿತ್ತು. ಆದರೆ, ಮಮತಾ ಬ್ಯಾನರ್ಜಿ ಅವರ ಸತತ ಮನವಿಯಿಂದ ಅವರನ್ನು ಬಿಡುಗಡೆ ಮಾಡುತ್ತಿದ್ದೇವೆ. ಅವರು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅವರಿಗೆ ಕನಿಷ್ಠ 15 ದಿನಗಳ ವಿಶ್ರಾಂತಿ ಅಗತ್ಯ" ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಗಾಲಿ ಕುರ್ಚಿ ಮೂಲಕ ಹೊರಬಂದ ದೀದಿ, ಕಾರ್ಯಕರ್ತರಿಗೆ ಕೈ ಮುಗಿದರು. ಬಳಿಕ ಅವರು ನೇರವಾಗಿ ಸಿಎಂ ನಿವಾಸಕ್ಕೆ ತೆರಳಿದ್ದಾರೆ. ಈ ವೇಳೆ ಟಿಎಂಸಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ನಂದಿ ಗ್ರಾಮದಿಂದ ಸ್ಪರ್ಧಿಸುತ್ತಿರುವ ದೀದಿ ಪ್ರಚಾರ ನಡೆಸುತ್ತಿರುವ ಸಂದರ್ಭ ಅವರನ್ನು ಅಪರಿಚಿತರು ತಳ್ಳಿದ್ದಾರೆ. ಈ ಘಟನೆಯ ಬಗ್ಗೆ ಆರೋಪಿಸಿದ ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿ, "ಇದರ ಹಿಂದೆ ಬಿಜೆಪಿ ಕೈವಾಡವಿದೆ" ಎಂದಿದ್ದರು.