ಗುವಾಹಟಿ, ಮಾ.13 (DaijiworldNews/MB): ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಅಸ್ಸಾಂನಲ್ಲಿ ಅಧಿಕಾರಿಗಳು 8.80 ಕೋಟಿ ರೂ. ನಗದು ಮತ್ತು 23.01 ಕೋಟಿ ರೂ.ಗಳ ಚಿನ್ನ, ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ಮುಖ್ಯ ಚುನಾವಣಾ ಅಧಿಕಾರಿ ನಿತಿನ್ ಖಡೆ ಶುಕ್ರವಾರ ಮಾತನಾಡಿ, ''ಅಸ್ಸಾಂ ಪೊಲೀಸ್, ರಾಜ್ಯ ಅಬಕಾರಿ ಇಲಾಖೆ, ಆದಾಯ ತೆರಿಗೆ ಇಲಾಖೆ, ಕಂದಾಯ ಗುಪ್ತಚರ ನಿರ್ದೇಶನಾಲಯ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಫ್ಲೈಯಿಂಗ್ ಸ್ಕ್ವಾಡ್ಗಳು ಇತರ ಸಂಸ್ಥೆಗಳು ಚುನಾವಣಾ ಆಯೋಗವು ಚುನಾವಣಾ ದಿನಾಂಕ ಘೋಷಿಸಿದಾಗಿನಿಂದ ರಾಜ್ಯಾದ್ಯಂತ ಕಾರ್ಯ ಪ್ರವೃತ್ತರಾಗಿದ್ದು ರಾಜ್ಯಾದ್ಯಂತ ನಗದು, ಮದ್ಯ, ಬೆಲೆಬಾಳುವ ವಸ್ತುಗಳು, ಮಾದಕ ವಸ್ತುಗಳ ಯಾವುದೇ ಅನುಮಾನಾಸ್ಪದ ಸಾಗಾಟವನ್ನು ತಡೆಯಲಾಗುತ್ತಿದೆ'' ಎಂದು ಹೇಳಿದರು.
''8.80 ಕೋಟಿ ರೂ.ಗಳ ನಗದು, 7.68 ಕೋಟಿ ಮೌಲ್ಯದ ಮದ್ಯ, 1.46 ಕೋಟಿ ರೂ.ಗಳ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು, ಸುಮಾರು 10.18 ಕೋಟಿ ರೂ. ಮೌಲ್ಯದ ಹೆರಾಯಿನ್, ಗಾಂಜಾ ಮತ್ತು ಬ್ರೌನ್ ಶುಗರ್, 3.69 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್, ನಿಷಿದ್ಧ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ'' ಎಂದು ತಿಳಿಸಿದರು.
126 ಸದಸ್ಯರ ಅಸ್ಸಾಂ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಮಾರ್ಚ್ 27 ರಂದು 47 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ 39 ಸ್ಥಾನಗಳಿಗೆ ಏಪ್ರಿಲ್ 1 ರಂದು ಮತದಾನ ನಡೆಯಲಿದ್ದು, ಉಳಿದ 40 ಕ್ಷೇತ್ರಗಳಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿವೆ ಎಂದರು. ಫಲಿತಾಂಶ ಮೇ 2 ರಂದು ಪ್ರಕಟಿಸಲಾಗುತ್ತದೆ.