ಬಿಹಾರ, ಮಾ.13(DaijiworldNews/PY): ಮಹಿಳೆಯೊಬ್ಬರು ಸಂತಾನಹರಣ ಶಸ್ತ್ರಚಿಕಿತ್ಸೆಯ ಬಳಿಕ ಗರ್ಭ ಧರಿಸಿದ ಘಟನೆ ಮುಜಾಫರ್ ಜಿಲ್ಲೆಯಲ್ಲಿ ನಡೆದಿದೆ.
ಫುಲಕುಮಾರಿ (30)ರಿಗೆ ನಾಲ್ಕು ಮಕ್ಕಳಿದ್ದು ಮತ್ತೊಂದು ಮಗು ಹೊಂದುವುದು ಬೇಡವಾಗಿತ್ತು.
ಫುಲಕುಮಾರಿ 2019ರ ಜುಲೈ ತಿಂಗಳಿನಲ್ಲಿ ಮೋತಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಟುಂಬ ಕಲ್ಯಾಣ ಯೋಜನೆಯಡಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ, ಶಸ್ತ್ರ ಚಿಕಿತ್ಸೆ ಪಡೆದುಕೊಂಡ ಎರಡು ವರ್ಷಗಳ ನಂತರ ಆಕೆ ಮತ್ತೆ ಗರ್ಭವತಿಯಾಗಿದ್ದಾಳೆ.
ವೈದ್ಯರ ನಿರ್ಲಕ್ಷ್ಯದಿಂದ ನಾನು ಮತ್ತೆ ಗರ್ಭವತಿಯಾದೆ ಎಂದು ಫುಲಕುಮಾರಿ ಆರೋಪಿಸಿದ್ದು, "ನನಗೆ ಇನ್ನೊಂದು ಮಗು ಬೇಕಾಗಿರಲಿಲ್ಲ. ಆ ಕಾರಣದಿಂದ ನಾನು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದು" ಎಂದಿದ್ದಾಳೆ.
ಈ ವಿಚಾರದ ಬಗ್ಗೆ ದೂರು ನೀಡಿರುವ ಫುಲಕುಮಾರಿ, "ನನಗೆ ಸರ್ಕಾರ 11 ಲಕ್ಷ. ರೂ. ಪರಿಹಾರ ನೀಡಬೇಕು" ಎಂದು ಆಗ್ರಹಿಸಿದ್ದಾಳೆ.
ಇನ್ನು ಫುಲಕುಮಾರಿ ಪತಿ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ್ದು, "ನಾವು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಹೀಗಿರುವಾಗ ಮಕ್ಕಳನ್ನು ಸಾಕುವ ಸಾಮರ್ಥ್ಯ ಇಲ್ಲ. ಹಾಗಾಗಿ ನನ್ನ ಪತ್ನಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದೆ. ಆದರೆ, ವೈದ್ಯರ ಕರ್ತವ್ಯ ಲೋಪದಿಂದ ಆಕೆ ಮತ್ತೆ ಗರ್ಭವತಿಯಾಗಿದ್ದಾಳೆ. ಈ ವಿಚಾರದ ಬಗ್ಗೆ ವೈದ್ಯ ಸುಧೀರ್ ಕುಮಾರ್ ಅವರೊಂದಿಗೆ ಕೇಳಿದಾಗ ಅವರು ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಗಾಗಿ ನಾವು ದೂರು ನೀಡಿದ್ದು, ಇದಕ್ಕೆ ಪರಿಹಾರ ನೀಡಬೇಕು" ಎಂದಿದ್ದಾರೆ.