ಬೆಂಗಳೂರು, ಮಾ 13 (DaijiworldNews/MS): ಮಹಾರಾಷ್ಟ್ರ ಸಹಿತ ನೆರೆಯ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಳ , ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಗುಂಪು ಗುಂಪಾಗಿ ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿರುವುದರಿಂದ ಹಾಗೂ ಮತ್ತೆ ರಾಜ್ಯಗಳಲ್ಲಿ ಕೊರೊನಾ ಸೋಂಕು ಭಾರೀ ಏರಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ 2ನೇ ಅಲೆ ಬಾರದಂತೆ ತಡೆಯಲು ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಪರೀಕ್ಷೆ ಹೆಚ್ಚಳ, ನಿಯಮಗಳ ಕಟ್ಟುನಿಟ್ಟು ಪಾಲನೆ ಸಹಿತ ಹಲವು ಕ್ರಮಗಳನ್ನು ಸರಕಾರ ಕೈಗೊಂಡಿದೆ.
ಮಾ. 11ರಂದು ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿ ಅಭಿಪ್ರಾಯ ಪಡೆಯಲಾಗಿದೆ. ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಬೆಂಗಳೂರು ಸಹಿತ ವಿವಿಧೆಡೆ ಪರೀಕ್ಷೆ ಹೆಚ್ಚಿಸಬೇಕು. ದಕ್ಷಿಣ ಕನ್ನಡದಲ್ಲಿ ಪ್ರತಿನಿತ್ಯ ೩೦೦೦ ಸಾವಿರಕ್ಕೂ ಹೆಚ್ಚು ದೈನಂದಿನ ಪರೀಕ್ಷೆ ಮಾಡಬೇಕು ಉಡುಪಿ , ದ.ಕ. ಬೀದರ್ ಕಲಬುರ್ಗಿ , ರಾಜಧಾನಿಯಲ್ಲಿ ಆರ್ -ಟಿ ಪಿಸಿಆರ್ ಪರೀಕ್ಷಾ ಪ್ರಮಾಣವನ್ನು ಹೆಚ್ಚಳ ಹಾಗೂ ಸೋಂಕಿತರ ಸಂಪರ್ಕ ಪತ್ತೆ ಕಾರ್ಯ ಚುರುಕುಗೊಳಿಸಲು ಸೂಚಿಸಲಾಗಿದೆ.
ಇದಲ್ಲದೆ ಕೇರಳ, ಮಹಾರಾಷ್ಟ್ರಗಳಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯವಾಗಿದ್ದು, ಗಡಿ ಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಎಲ್ಲ ಜಿಲ್ಲೆಗಳು ನಿತ್ಯ ಇಂತಿಷ್ಟು ಮಂದಿಗೆ ಲಸಿಕೆ ನೀಡಬೇಕು ಎಂದು ಗುರಿ ನೀಡಲಾಗಿದೆ.
ಮದುವೆ, ಸಭೆ ಸಮಾರಂಭಗಳಲ್ಲಿ ಜನರ ಭಾಗವಹಿಸುವಿಕೆಗೆ ಮಿತಿ ಹೇರಲಾಗಿದೆ. ಕಡ್ಡಾಯವಾಗಿ ಮೂರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.