ಬೆಂಗಳೂರು, ಮಾ. 12 (DaijiworldNews/SM): ಒಂದೇ ದಿನ ರಾಜ್ಯದ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಶುಕ್ರವಾರ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದರು.
ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ವೈದ್ಯರು ಅಬ್ಸರ್ವೇಷನ್ ಗೆ ಒಳಪಡಿಸಿದರು. ಸುಮಾರು ಅರ್ಧ ಗಂಟೆಯ ಬಳಿಕ ಆಸ್ಪತ್ರೆಯಿಂದ ಹೊರಬಂದು ಮಾತನಾಡಿದ ಸಿಎಂ, ಲಸಿಕೆ ಹಾಕಿಸಿಕೊಂಡರೆ ಯಾವುದೇ ಸಮಸ್ಯೆ ಅಗೋದಿಲ್ಲ. ನಾನು ದೇಸಿ ಲಸಿಕೆ ಕೋವ್ಯಾಕ್ಸಿನ್ ಹಾಕಿಸಿಕೊಂಡಿದ್ದೇನೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬಹುದು. ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ ಎಂದರು.
ಮತ್ತೊಂದೆಡೆ ಆರೋಗ್ಯ ಸಚಿವ ಸುಧಾಕರ್ ಅವರು ಕೂಡ ಕೊರೋನಾ ವಿರುದ್ಧದ ಲಸಿಕೆಯನ್ನು ಪಡೆದರು, ಬಳಿಕ ಮಾತನಾಡಿ, ಹಿರಿಯ ನಾಗರಿಕರು, ಅರ್ಹ ವ್ಯಕ್ತಿಗಳು ಆದಷ್ಟು ಬೇಗ ನೋಂದಣಿ ಮಾಡಿಕೊಂಡು ತಪ್ಪದೆ ಲಸಿಕೆ ಪಡೆಯಬೇಕೆಂದು ಮನವಿ ಮಾಡಿಕೊಂಡರು. ಕರ್ನಾಟಕದ ಒಟ್ಟು 54,87,399 ಮಂದಿ ಹಿರಿಯ ನಾಗರಿಕರಿದ್ದು, ಈ ಪೈಕಿ ಇಲ್ಲಿಯ ತನಕ ಪೈಕಿ ಕೇವಲ ಶೇ.4ರಷ್ಟು ಜನರು ಮಾತ್ರ ಕೋವಿಡ್-19 ಲಸಿಕೆ ಸ್ವೀಕರಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.