ಬೆಂಗಳೂರು, ಮಾ.12 (DaijiworldNews/PY): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಮೊದಲ ದಿನವೇ ಐವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದೆ. ಎಸ್ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವವವರೆಲ್ಲರೂ ಕೂಡಾ ಪತ್ರಕರ್ತರು ಎಂದು ಹೇಳಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಎಸ್ಐಟಿಗೆ ವಹಿಸಿತ್ತು. ಸೌಮೇಂದ್ರ ಮುಖರ್ಜಿಯವರ ನೇತೃತ್ವದ ತಂಡ ಈ ಪ್ರಕರಣದ ಬಗ್ಗೆ ಇಂದಿನಿಂದ ತನಿಖೆ ಆರಂಭಿಸಿತ್ತು.
ಇಲ್ಲಿಯವರೆಗೆ ಐದು ಮಂದಿಯನ್ನು ಎಸ್ಐಟಿ ಪೊಲೀಸರು ವಶ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಪ್ರಕರಣದ ಪ್ರಮುಖ ರೂವಾರಿಗಳು ಸಿಡಿ ಬಿಡುಗಡೆ ಆದ ದಿನದಿಂದ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಆಂಧ್ರ ಗಡಿಯತ್ತ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನಿಂದಲೇ ರಷ್ಟಾ ಸರ್ವರ್ ಹ್ಯಾಕ್ ಮಾಡಿದ್ದಂತ ವ್ಯಕ್ತಿಯೊಬ್ಬರು ರಮೇಶ್ ಜಾರಕಿಹೊಳಿ ರಾಸಲೀಲೆ ದೃಶ್ಯಾವಳಿಯನ್ನು ಅಪ್ಲೋಡ್ ಮಾಡಿದ್ದರು. ಈ ವ್ಯಕ್ತಿ ಕೂಡಾ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಆ ವ್ಯಕ್ತಿಯ ಪತ್ತೆಗಾಗಿ ಕೂಡಾ ಎಸ್ಐಟಿ ಪೊಲೀಸರು ಬಲೆ ಬೀಸಿದ್ದಾರೆ.
ಎಸ್ಐಟಿ ವಶಕ್ಕೆ ಪಡೆದುಕೊಂಡ ಐವರ ಪೈಕಿ, ಮೊದಲನೆಯಾತ ದಿನೇಶ್ ಕಲ್ಲಹಳ್ಳಿಗೆ ಸಿಡಿ ಕೊಟ್ಟವರಾಗಿದ್ದಾರೆ. ಎರಡನೇ ವ್ಯಕ್ತಿ ಎಡಿಟ್ ಮಾಡಿದಾತ, ಮೂರನೇ ವ್ಯಕ್ತಿ ಸಿಡಿಗೆ ಸ್ಕ್ರೀಫ್ಟ್ ಬರೆದವನು ಎನ್ನಲಾಗಿದೆ. ನಾಲ್ಕನೇ ವ್ಯಕ್ತಿಯನ್ನು ಚಿಕ್ಕಮಗಳೂರಿನ ಅಲ್ದೂರಿನಲ್ಲಿ ವಶಕ್ಕೆ ಪಡೆಯಲಾಗಿದ್ದು, ಐದನೇ ವ್ಯಕ್ತಿ ಸಿಡಿ ನೀಡಲು ವ್ಯಕ್ತಿಯ ಜೊತೆ ಬಂದಿದ್ದ ರಾಮನಗರ ಮೂಲದ ಯುವತಿ ಎನ್ನಲಾಗಿದೆ.
ಈ ಐವರನ್ನುಎಸ್ಐಟಿ ಪೊಲೀಸರು ಪ್ರತ್ಯೇಕ ಸ್ಥಳಗಳಲ್ಲಿ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸಿಡಿ ಬಿಡುಗಡೆಯಾದ ಕಾರಣ ಪ್ರಕರಣದ ಪ್ರಮುಖ ಕಿಂಗ್ ಪಿನ್ ಎಂದು ಹೇಳಲಾಗುತ್ತಿರುವ ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಹ ಎಸ್ಐಟಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.