ನವದೆಹಲಿ, ಮಾ.12 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್ಕಿಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಆರೋಪ ಎದುರುಸುತ್ತಿರುವ ಪರಿಸರ ಕಾರ್ಯಕರ್ತ ಶುಭಮ್ ಕರ್ ಚೌಧರಿ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಮೂರು ದಿನಗಳವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಚೌಧರಿ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ಪೊಲೀಸರು ಮನವಿ ಮಾಡಿದ್ದು, ಬಳಿಕ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಆರೋಪಿಗಳಿಗೆ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದರು ಎನ್ನಲಾಗಿದೆ.
ಇನ್ನು ಶುಭಮ್ ಕರ್ ಚೌಧರಿಗೆ ಬಾಂಬೆ ಹೈಕೋರ್ಟ್ನ ಗೋವಾ ನ್ಯಾಯಪೀಠ ಇತ್ತೀಚೆಗೆ ಸಾರಿಗೆ ಜಾಮೀನು ನೀಡಿದ್ದು, ಇದೇ ಪ್ರಕರಣ ಆರೋಪಿಗಳಾದ ಪರಿಸರ ಕಾರ್ಯಕರ್ತೆ ದಿಶಾ ರವಿ ಮತ್ತು ಶಾಂತನು ಮುಕುಲ್ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನಿನ ಅರ್ಜಿಯ ವಿಚಾರಣೆ ಮಾರ್ಚ್ 15ರಂದು ನಡೆಯಲಿರುವ ಕಾರಣ, ಅಲ್ಲಿಯವರೆಗೂ ಈ ವಿಚಾರಣೆಯನ್ನು ಮುಂದೂಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.