ಬೆಂಗಳೂರು, ಮಾ.12 (DaijiworldNews/PY): ಫುಡ್ ಡೆಲಿವರಿಗೆ ಹೋಗಿದ್ದ ಸಂದರ್ಭ ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಯುವತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, "ನನ್ನ ಮೇಲೆ ಯುವತಿಯೇ ಹಲ್ಲೆ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ" ಎಂದು ಯುವಕ ಆರೋಪಿಸಿದ್ದಾನೆ.
ಫುಡ್ ಡೆಲಿವರಿಗೆ ಹೋಗಿದ್ದ ಸಂದರ್ಭ ಯುವತಿ ಹಿತೇಶಾ ಇಂದ್ರಾಣಿ ಮೇಲೆ ಜೊಮ್ಯಾಟೋ ಬಾಯ್ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದ ಬೆನ್ನಲ್ಲೇ ಡೆಲಿವರಿ ಬಾಯ್ ಅನ್ನು ಪೊಲೀಸರು ಬಂಧಿಸಿದ್ದರು.
ಇದೀಗ ವಿಚಾರಣೆಯ ವೇಳೆ ಡೆಲಿವರಿ ಬಾಯ್ ಕಾಮರಾಜ್, "ಯುವತಿಯೇ ನನ್ನ ಮೇಲೆ ಹಲ್ಲೆ ಮಾಡಿದ್ದಾಗಿ ಹೇಳಿದ್ದಾನೆ. ಅಂದು ಫುಡ್ ಡೆಲಿವರಿ ಮಾಡುವುದು ತಡವಾಯಿತು. ತಡವಾದ ಕಾರಣ ಯುವತಿ ನನ್ನೊಂದಿಗೆ ಜಗಳವಾಡಿದ್ದಾಳೆ. ಟ್ರಾಫಿಕ್ ಸಮಸ್ಯೆಯ ಕಾರಣದಿಂದ ತಡವಾಗಿದೆ ಎಂದು ನಾನು ತಿಳಿಸಿದ್ದೆ. ಪಾರ್ಸ್ಲ್ಗೆ ಹಣ ಪಾವತಿ ಮಾಡುವಂತೆ ಕೇಳಿದೆ. ಆದರೆ, ಯುವತಿ ಹಣ ಪಾವತಿ ಮಾಡುವುದಿಲ್ಲ ಎಂದು ಹೇಳಿದ್ದು, ಜೊಮ್ಯಾಟೋ ಕಸ್ಟಮರ್ ಸಪೋರ್ಟರ್ ಬಳಿ ಮಾತನಾಡಿದ್ದಾಳೆ. ಆತ ಫುಡ್ ಹಿಂದಿರುಗಿಸುವಂತೆ ಹೇಳಿದ್ದು, ಹಾಗಾಗಿ ನಾನು ಯುವತಿಯ ಜೊತೆ ಫುಡ್ ಹಿಂದಿರುಗಿಸಲು ಕೇಳಿದೆ. ಆದರೆ ಯುವತಿ ಹಣವನ್ನೂ ನೀಡದೇ, ಫುಡ್ ಅನ್ನು ಹಿಂದಿರುಗಿಸದೇ ಜಗಳವಾಡಿದ್ದಾಳೆ" ಎಂದು ಹೇಳಿದ್ದಾನೆ.
"ಅನಿವಾರ್ಯವಾಗಿ ಫುಡ್ ಪಾರ್ಸಲ್ ಅಲ್ಲೇ ಬಿಟ್ಟು ಹಿಂದಿರುಗಲು ಹೋದೆ. ಆದರೆ, ಆ ವೇಳೆ ಯುವತಿ ನನ್ನ ಮೇಲೆ ಚಪ್ಪಲಿ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಅಲ್ಲದೇ, ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಈ ವೇಳೆ ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಯುವತಿಯ ಕೈಯಲ್ಲಿದ್ದ ಉಂಗುರವೇ ಆಕೆಯ ಮೂಗಿಗೆ ತಾಗಿ ರಕ್ತ ಬರಲಾರಂಭಿಸಿದೆ. ಇದರಿಂದ ಭಯಗೊಂಡು ನಾನು ಸ್ಥಳದಿಂದ ತಪ್ಪಿಸಿಕೊಂಡು ಬಂದೆ" ಎಂದು ತಿಳಿಸಿದ್ದಾನೆ.
ಈ ಘಟನೆಯ ಬೆನ್ನಲ್ಲೇ ಜೊಮ್ಯಾಟೋ, ಕಾಂಮ್ರಾಜ್ನನ್ನು ಕೆಲಸದಿಂದ ವಜಾಮಾಡಿದೆ. ಘಟನೆಯ ಬಗ್ಗೆ ಕಾಮ್ರಾಜ್ ನೀಡಿದ ಸ್ಪಷ್ಟನೆಯ ಬೆನ್ನಲ್ಲೇ ಹಲವು ಮಂದಿ ಆತನ ಬೆಂಬಲಕ್ಕೆ ನಿಂತಿದ್ದಾರೆ.