ಬೆಂಗಳೂರು, ಮಾ.12 (DaijiworldNews/HR): ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಬಾಣಸವಾಡಿ ಉಪವಿಭಾಗದ ಪೊಲೀಸರು ತೆಲುಗು ನಟ ಸೇರಿದಂತೆ ಐದು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ತೆಲುಗುನಟ, ಒಬ್ಬರು ಉದ್ಯಮಿ, ನಿರ್ಮಾಪಕರೊಬ್ಬರು ಸೇರಿದಂತೆ ಐದು ಮಂದಿಗೆ ಮಾರ್ಚ್.13ರಂದು ವಿಚಾರಣೆಗೆ ಹಾಜರಾಗುವಂತೆ ಗೋವಿಂದಪುರ ಉಪವಿಭಾಗದ ಪೊಲೀಸರು ನೋಟಿಸ್ ನೀಡಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಸಿದಂತೆ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಸ್ತಾನ್, ವಿಕ್ಕಿ ಮಲ್ಹೋತ್ರ ಸೇರಿದಂತೆ ಇನ್ನಿತರರ ಹೆಸರು ಕೇಳಿಬಂದಿದ್ದು, ಆ ಸಂದರ್ಭದಲ್ಲಿ ಮಸ್ತಾನ್ನನ್ನು ವಿಚಾರಣೆಮಾಡಿದಾಗ ಚಿತ್ರ ನಿರ್ಮಾಪಕ ಶಂಕರಗೌಡ ಹೆಸರು ಕೂಡ ಹೇಳಿದ್ದು, ಬಳಿಕ ನಿರ್ಮಾಪಕ ಶಂಕರಗೌಡ ಅವರ ಕಚೇರಿಯಲ್ಲಿ ನೈಟ್ ಪಾರ್ಟಿ ನಡೆಯುತ್ತಿದೆ ಎಂದು ಬಾಣಸವಾಡಿ ಉಪವಿಭಾಗದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಬಳಿಕ ಕಚೇರಿ ಮೇಲೆ ದಾಳಿ ಮಾಡಿ ಅವರನ್ನು ವಿಚಾರಣೆಗೆ ಒಳಪಡಿಸಿ ಪಾರ್ಟಿ ಆಯೋಜನೆ ಬಗ್ಗೆ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಇನ್ನು ಈ ಮಾಹಿತಿಗಳ ಆಧಾರದ ಮೇಲೆ ತೆಲುಗುನಟ, ಉದ್ಯಮಿ, ನಿರ್ಮಾಪಕ ಸೇರಿದಂತೆ ಐದು ಮಂದಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.