ಯಾದಗಿರಿ, ಮಾ.12 (DaijiworldNews/PY): ಯುವಕನೋರ್ವ ಶಿವಲಿಂಗದ ಮೇಲೆ ಚಪ್ಪಲಿ ಕಾಲನ್ನಿಟ್ಟು ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ದೋರನಹಳ್ಳಿ ಗ್ರಾಮದ ಯುವಕ ಶಿವಲಿಂಗದ ಮೇಲೆ ಚಪ್ಪಲಿ ಕಾಲನ್ನಿಟ್ಟು ವಿಕೃತಿ ಮೆರೆದಿದ್ದು, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಯುವಕ ಪೋಸ್ಟ್ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಗ್ರಾಮದ ಯುವಕರು ಸೇರಿದಂತೆ ಹಿಂದೂ ಪರ ಸಂಘಟನೆಗಳು, ಶ್ರೀರಾಮ ಸೇನೆ ಹಾಗೂ ಸಮಾಜದ ಯುವಕರು ಶಹಾಪುರ-ಯಾದಗಿರಿ ರಾಜ್ಯ ಹೆದ್ದಾರಿ ರಸ್ತೆ ತಡೆ ಕೈಗೊಂಡಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದ ಶಹಾಪುರ ನಗರಠಾಣೆಯ ಪಿಐ ಚೆನ್ನಯ್ಯ ಹಿರೇಮಠ ಅವರು ಸ್ಥಳಕ್ಕಾಗಮಿಸಿದ್ದು, "ತಪ್ಪಿತಸ್ಥರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗುವುದು" ಎಂದು ಪ್ರತಿಭಟನಾ ನಿರತರಿಗೆ ಭರವಸೆ ನೀಡಿದ್ದಾರೆ.
ಈ ವೇಳೆ ಪ್ರತಿಭಟನಾ ನಿರತರು, "ಈ ಕೂಡಲೇ ಕ್ರಮ ಕೈಗೊಳ್ಳಬೇಕು. ಮುಂದೆ ರೀ ರೀತಿಯ ಘಟನೆ ಆಗದಂತೆ ಅಗತ್ಯವಾದ ಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಕೂಡಲೇ ಪಿಐ ಚೆನ್ನಯ್ಯ ಹಿರೇಮಠ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ವಿಕೃತ ಮೆರೆದ ಯುವಕನ ಮನೆಗೆ ತೆರಳುವ ಸಂದರ್ಭ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸರು ಪ್ರತಿಭಟನಾನಿರತರನ್ನು ಚದುರಿಸಿದ ಘಟನೆಯೂ ನಡೆದಿದೆ. ಈ ವೇಳೆ ವಿಕೃತ ಮರೆದ ಯುವಕ ಪರಾರಿಯಾಗಿದ್ದು, ಯುವಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪಿಐ ಚೆನ್ನಯ್ಯ ಹಿರೇಮಠ ತಿಳಿಸಿದ್ದಾರೆ.