ಗುಜರಾತ್, ಮಾ.12 (DaijiworldNews/PY): ಗುಜರಾತ್ನ ಅಹಮದಾಬಾದ್ನಲ್ಲಿರುವ ಸಬರ್ಮತಿ ಆಶ್ರಮದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಚಟುವಟಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು.
ಶುಕ್ರವಾರ ಬೆಳಗ್ಗೆ ಸಬರ್ಮತಿ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಬಳಿಕ ಸಬರ್ಮತಿ ಆಶ್ರಮದ ಹೃದಯ್ ಕುಂಜ್ನಲ್ಲಿ ಮಹಾತ್ಮ ಗಾಂಧಿ ಭಾವಚಿತ್ರವನ್ನು ಅನಾವರಣಗೊಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 2022ರ ಆಗಸ್ಟ್ 15ಕ್ಕೆ 75 ವರ್ಷಗಳು ತುಂಬುತ್ತಿರುವ ಹಿನ್ನೆಲೆ ದೇಶದಾದ್ಯಂತ 75 ವಾರಗಳ ಕಾರ್ಯಕ್ರಮಕ್ಕೆ ಇಂದು ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ. ಗಾಂಧೀಜಿ ಅವರ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಗಿ ಇಂದಿಗೆ 91 ವರ್ಷವಾದ ಹಿನ್ನೆಲೆ ಸಬರ್ಮತಿ ಆಶ್ರಮದಿಂದ ಸಾಗಲಿರುವ ದಂಡಿನ ಮೆರವಣಿಗೆಗೂ ಕೂಡಾ ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ.
ಅಮೃತ ಮಹೋತ್ಸವದ ಅಂಗವಾಗಿ ಅಹಮದಾಬಾದ್ ನ ಅಭಯ್ ಘಾಟ್ ಬಳಿ ಏರ್ಪಡಿಸಲಾಗಿದ್ದ ವಿಶೇಷ ಪ್ರದರ್ಶನಲ್ಲಿ ಪ್ರಧಾನಿ ಮೋದಿ ಅವರು ಪಾಲ್ಗೊಂಡಿದ್ದು, ಮ್ಯಾಗಜಿನ್ ಸೇರಿದಂತೆ ಛಾಯಾಚಿತ್ರಗಳು ಹಾಗೂ ಇತರ ಸಂಗ್ರಹಗಳನ್ನು ವೀಕ್ಷಿಸಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಅವರು, "ಇಂದು ಗುಜರಾತ್ನ ಅಬರ್ಮತಿ ಆಶ್ರಮದಲ್ಲಿ ಅಮೃತ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಇಲ್ಲಿ ಮಹಾತ್ಮ ಗಾಂಧಿ ಅವರು ದಂಡಿನ ಯಾತ್ರೆ ಪ್ರಾರಂಭ ಮಾಡಿದ್ದರು. ಭಾರತೀಯರ ಪಾಲಿಗೆ ಸತ್ಯಾಗ್ರಹ ಹೆಮ್ಮೆಯ ಗಳಿಗೆಯಾಗಿದೆ. ಇದು ಭಾರತೀಯರಲ್ಲಿ ಆತ್ಮನಿರ್ಭರ ಮನೋಭಾವವನ್ನು ಬೆಳೆಸಲು ಮುಖ್ಯವಾಗಿತ್ತು. ಸ್ಥಳೀಯತೆಗೆ ಆದ್ಯತೆ ನೀಡುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಉತ್ತಮವಾದ ಕಾಣಿಕೆಯಾಗಿದೆ" ಎಂದು ಹೇಳಿದ್ದರು.
"ಸ್ಥಳೀಯ ವಸ್ತುಗಳನ್ನು ಖರೀದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಸ್ಥಳೀಯತೆಗೆ ಆದ್ಯತೆ ನೀಡಬೇಕು" ಎಂದು ಜನತೆಗೆ ಕರೆ ನೀಡಿದ್ದಾರೆ.