ಕೊಚ್ಚಿ, ಮಾ.12 (DaijiworldNews/PY): ಚಿನ್ನ ಸಾಗಣೆ ಪ್ರಕರಣದ ಆರೋಪಿ ಸಂದೀಪ್ ನಾಯರ್ ಅವರು ಜಾರಿ ನಿರ್ದೇಶನಾಲಯದ ವಿರುದ್ದದ ಹೇಳಿಕೆ ನೀಡಿದ್ದು, "ಈ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಹೆಸರಿಸಲು ಕೆಲವು ಇಡಿ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿದ್ದಾರೆ" ಎಂದು ಜಿಲ್ಲಾ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಂದೀಪ್ ನಾಯರ್ ಜಿಲ್ಲಾ ನ್ಯಾಯಾಧೀಶರಿಗೆ ಬರೆದ ಮೂರು ಪುಟದ ಪತ್ರವು ಶುಕ್ರವಾರ ಹೊರಬಿದ್ದಿದೆ.
ಪತ್ರದಲ್ಲಿ, "ಈ ವಿವಾದಾತ್ಮಕ ಪ್ರಕರಣದಲ್ಲಿ ಹಿರಿಯ ರಾಜಕಾರಣಿಯ ಮಗನ ಹೆಸರನ್ನೂ ಕೂಡಾ ಹೇಳಬೇಕು ಎಂದು ಸಂದೀಪ್ ನಾಯರ್ ಅವರನ್ನು ಇಡಿ ಅಧಿಕಾರಿಗಳು ಒತ್ತಾಯಿಸಿದ್ದಾರೆ" ಎಂದು ತಿಳಿದುಬಂದಿದೆ.
"ತಮ್ಮ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಜಾಮೀನು ಪಡೆಯಲು ಹಾಗೂ ಇತರ ವಿಷಯಗಳಿಗೆ ಸಹಾಯ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ" ಎಂದು ಹೇಳಿದ್ದಾರೆ.
ಚಿನ್ನ ಸಾಗಣೆ ಪ್ರಕರಣದ ಆರೋಪಿಯಾಗಿ ಸಂದೀಪ್ ನಾಯರ್ ಅವರ ಹೆಸರನ್ನು ಕಸ್ಟಮ್ಸ್ ಹೆಸರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲು ಕೂಡಾ ಕೋರ್ಟ್ ಅನುಮತಿ ಪಡೆದಿದ್ದರು.
ಪ್ರಸ್ತುತ ಸಂದೀಪ್ ನಾಯರ್ ಅವರು ಜೈಲಿನಲ್ಲಿದ್ದಾರೆ. ಏತನ್ಮಧ್ಯೆ ಜಿಲ್ಲಾ ನ್ಯಾಯಾಧೀಶರಿಗೆ ಸಂದೀಪ್ ಬರೆದ ಪತ್ರದ ಹಿಂದೆ ಪಿತೂರಿ ಇದೆ ಎಂದು ಇಡಿ ಆರೋಪಿಸಿದೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಇಡಿ ಹೇಳಿದೆ.
"ಚಿನ್ನ ಕಳ್ಳಸಾಗಣೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ವಿಧಾನಸಭೆ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಮತ್ತು ರಾಜ್ಯದ ಇತರೆ ಮೂವರು ಸಚಿವರ ಪಾತ್ರವಿದೆ" ಎಂದು ಚಿನ್ನ ಕಳ್ಳ ಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಸ್ವಪ್ನ ಸುರೇಶ್ ಹೇಳಿಕೆ ನೀಡಿದ್ದರು.
ಇದಾದ ಬಳಿಕ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು ಇಡಿ ವಿರುದ್ದ ಹೇಳಿಕೆ ನೀಡಿದ್ದು, "ಮುಖ್ಯಮಂತ್ರಿ ವಿರುದ್ದ ಹೇಳಿಕೆ ನೀಡುವಂತೆ ಇಡಿ ಅಧಿಕಾರಿಗಳು ಸ್ವಪ್ನಾ ಅವರನ್ನು ಒತ್ತಾಯಿಸಿದ್ದರು" ಎಂದು ಹೇಳಿದ್ದಾರೆ.