ನವದೆಹಲಿ, ಮಾ.12 (DaijiworldNews/HR): ಲಾಕ್ಡೌನ್ ವಿಧಿಸಿದ್ದ ವೇಳೆ ವಿದೇಶಗಳಿಂದ ಅದರಲ್ಲಿಯೂ ವಿಶೇಷವಾಗಿ ಚೀನಾ ಹಾಗೂ ಪಾಕಿಸ್ತಾನದಿಂದ ಭಾರತದ ಮೇಲೆ ಸೈಬರ್ ದಾಳಿ ಯತ್ನ ನಡೆದಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಾಂಧರ್ಭಿಕ ಚಿತ್ರ
ಮಾಹಿತಿ ತಂತ್ರಜ್ಞಾನ ವಿಷಯದ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯ 24ನೇ ವರದಿಯಲ್ಲಿ ಚೀನಾ, ಪಾಕಿಸ್ತಾನ ಸೇರಿದಂತೆ ವಿದೇಶಗಳಿಂದ ಸೈಬರ್ ದಾಳಿ ಯತ್ನ ನಡೆದಿತ್ತು ಎಂದು ಉಲ್ಲೇಖಿಸಲಾಗಿದ್ದು, ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಇನ್ನು ದಾಳಿ ಯತ್ನಗಳ ಮೇಲೆ ನಿಗಾ ಇಡಲು ಹಾಗೂ ಅವುಗಳನ್ನು ವಿಫಲಗೊಳಿಸಲು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅನುಸರಿಸಲಾಗಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ಪಾಳಿಗಳಲ್ಲಿ ನಿಯೋಜಿಸಲಾಗಿದೆ. ವಿಶ್ವಾಸಾರ್ಹ ನೆಟ್ವರ್ಕ್ಗಳು (ವಿಪಿಎನ್) ಬಳಸಿ ಭದ್ರತಾ ಲೆಕ್ಕಪರಿಶೋಧನೆ ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಚೀನಾದ ಹ್ಯಾಕರ್ಗಳು ಭಾರತದ ಪವರ್ ಗ್ರಿಡ್ ಅನ್ನು ಗುರಿಯಾರಿಸಿ ಸೈಬರ್ ದಾಳಿಗೆ ಯತ್ನಿಸಿದ್ದರು ಎಂದು ಅಮೇರಿಕಾ ಮೂಲದ ಖಾಸಗಿ ಸೈಬರ್ ಸೆಕ್ಯುರಿಟಿ ಸಂಸ್ಥೆಯೊಂದು ಇತ್ತೀಚೆಗೆ ತಿಳಿಸಿದ್ದು, ಕಳೆದ ವರ್ಷ ಜೂನ್ನಲ್ಲಿ ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ಮಧ್ಯೆ ನಡೆದ ಸಂಘರ್ಷದ ಬಳಿಕ ಈ ದಾಳಿ ಯತ್ನ ನಡೆದಿತ್ತು ಎಂದು ವರದಿಯಾಗಿದೆ.