ಹಾಸನ, ಮಾ.12 (DaijiworldNews/HR): ನಿಶ್ಚಿತಾರ್ಥ ಅದ್ದೂರಿಯಾಗಿ ಮಾಡಿಕೊಂಡ ಬಳಿಕ ಗೋವಾಗೆ ಹೋಗಿದ್ದ ವೇಳೆ ಯುವತಿ ನನ್ನ ಜೊತೆ ಖುಷಿಯಾಗಿ ಇರಲಿಲ್ಲ ಎಂಬ ನೆಪವೊಡ್ಡಿ ಯುವಕನೊಬ್ಬ ಮದುವೆ ಬೇಡವೆಂದು ಉಲ್ಟಾ ಹೊಡೆದಿದ್ದು, ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಬೇಲೂರು ಗ್ರಾಮವೊಂದರ ನಿವಾಸಿ ಕಾವ್ಯಾ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮದ ನಿಶ್ಚಿತ್ ಸಿ.ಎಸ್ ಅವರ ನಿಶ್ಚಿತಾರ್ಥ ಫೆಬ್ರವರಿ.14ರಂದು ನೇರವೇರಿದ್ದು, ಮೇ 09ಕ್ಕೆ ಮದುವೆ ದಿನಾಂಕ ನಿಗದಿಯಾಗಿ, ಕಲ್ಯಾಣ ಮಂಟಪ ಕೂಡ ಕಾಯ್ದಿರಿಸಲಾಗಿದೆ.
ನಿಶ್ಚಿತ್ ಪಾಲಕರ ಬೇಡಿಕೆಯಂತೆ ವಧುವಿನ ತಂದೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿ ಮಾಡಿಕೊಟ್ಟಿದ್ದರು. ಆದರೆ ವರ ಇದೀಗ ಮದುವೆ ಬೇಡ ಎಂದ ಉಲ್ಟಾ ಹೊಡೆಯುತ್ತಿದ್ದು, ಇದರಿಂದ ಮನನೊಂದ ವಧು ಆತ್ಮಹತ್ಯೆಗು ಯತ್ನಿಸಿದ್ದಾಳೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಅರೆಹಳ್ಳಿ ಠಾಣೆಯಲ್ಲಿ ದೂರು ನೀಡಿದರು ವಧುವಿನ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಹಾಸನ ಎಸ್ಪಿ ಕಚೇರಿಗೆ ವಧು ಹಾಗೂ ಪೋಷಕರು ದೂರು ನೀಡಿದ್ದು, ದೂರಿನಲ್ಲಿ ಮದುವೆಗೂ ಮುಂಚೆ ನಿಶ್ಚಿತ್, ನನ್ನನ್ನು ಗೋವಾಗೆ ಕರೆದುಕೊಂಡ ಹೋದರು. ಹೇಳಿದಂತೆ ಕೇಳಲು ಒತ್ತಾಯಿಸಿದರು. ಆದರೆ ನಾನು ಒಪ್ಪಲಿಲ್ಲ. ಇದೇ ಕಾರಣಕ್ಕೆ ನನ್ನ ಮೇಲೆ ಕೋಪಿಸಿಕೊಂಡರು. ಬಳಿಕ ನಿಶ್ಚಿತ್ ಮತ್ತು ಅವರ ತಾಯಿ ನನ್ನ ಮೇಲೆ ಸಂದೇಹ ವ್ಯಕ್ತಪಡಿಸಿ, ನನ್ನ ವ್ಯಕ್ತಿತ್ವ ಸರಿಯಿಲ್ಲ ಇಂದು ಕುಂಟು ನೆಪ ಹೇಳಿ ಮದುವೆ ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ಕಾವ್ಯಾ ಆರೋಪಿಸಿದ್ದಾರೆ.