ನವದೆಹಲಿ, ಮಾ.11 (DaijiworldNews/MB) : ''ಇಡೀ ಜಗತಿಗೆಯೇ ಆತ್ಮನಿರ್ಭರ ಭಾರತ ಉತ್ತಮವಾದುದು. ಮಾನವೀಯತೆಗಾಗಿ ಸಂಪತ್ತು, ಮೌಲ್ಯ ಬೆಳೆಸುವುದೇ ಆತ್ಮನಿರ್ಭರ ಭಾರತದ ತಿರುಳು'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುರುವಾರ ವಿಡಿಯೊ ಕಾನ್ಪರೆನ್ಸ್ ಮೂಲಕ ಸ್ವಾಮಿ ಚಿದ್ಭವನಂದಾ ಅವರ ಭಗವದ್ಗೀತೆಯ ಕಿಂಡಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ''ಪ್ರಸ್ತುತ ಇ-ಪುಸ್ತಕಗಳು ಯುವಜನರು ಅಧಿಕವಾಗಿ ಓದಲು ಆರಂಭಿಸಿದ್ದಾರೆ. ಭಗವದ್ಗೀತೆಯ ಉತ್ತಮ ಮೌಲ್ಯ, ಅಲೋಚನೆ, ಚಿಂತನೆಯನ್ನು ಯುವಜನರು ಈ ಇ–ಪುಸ್ತಕದ ಮುಖೇನ ಪಡೆಯಲು ಸಹಾಯ ಮಾಡುವ ಈ ಪ್ರಯತ್ನ ಪ್ರಶಂಸನೀಯ'' ಎಂದು ಶ್ಲಾಘಿಸಿದರು.
''ಭಾರತವು ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಬೇರೆ ದೇಶಗಳಿಗೆ ಅಗತ್ಯವಾದ ಔಷಧಿಗಳನ್ನು ರಫ್ತು ಮಾಡಿದೆ. ತನ್ನಿಂದ ಆಗುವ ಸಹಾಯವನ್ನು ಭಾರತ ಮಾಡಿದೆ. ನಮ್ಮ ವಿಜ್ಞಾನಿಗಳು ಶೀಘ್ರದಲ್ಲೇ ಕೊರೊನಾಗೆ ಲಸಿಕೆಯನ್ನು ಅಭಿವೃದ್ದಿಪಡಿಸಿದರು. ಪ್ರಸ್ತುತ ನಮ್ಮ ದೇಶದಲ್ಲಿ ಅಭಿವೃದ್ದಿಪಡಿಸಿದ ಲಸಿಕೆಯನ್ನು ವಿಶ್ವದೆಲ್ಲೆಡೆ ಬಳಸಲಾಗುತ್ತಿದೆ. ನಾವು ಮಾನವೀಯತೆಗೆ ಸಹಾಯ ಮಾಡಲು ಬಯಸುತ್ತೇವೆ. ಇದನ್ನೇ ಭಗವದ್ಗೀತೆ ನಮಗೆ ಕಲಿಸಿಕೊಟ್ಟಿದೆ'' ಎಂದು ಹೇಳಿದ್ದಾರೆ.
''ಕಾಯಕ ಮಾಡುವುದರಿಂದ ನಾನು ಏನನ್ನೂ ಸಾಧಿಸಬಹುದು ಎಂಬುದು ಈ ಮಹಾಕಾವ್ಯದ ಮೂಲ ಸಂದೇಶವಾಗಿದೆ. ಅದೇ ರೀತಿ ದೇಶದ 103 ಕೋಟಿ ಜನರು ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ ಕೆಲಸ ಮಾಡಲಿದ್ದಾರೆ. ನಮ್ಮ ದೇಶ ಆತ್ಮ ನಿರ್ಭರವಾಗಬೇಕು ಎಂಬುದು ಎಲ್ಲರ ಇಚ್ಛೆ'' ಎಂದರು.